ಸುಳ್ಯ: ವ್ಯಕ್ತಿಯೋರ್ವರನ್ನು ಮನೆಗೆ ಕರೆದು ತಂಡದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಲ್ಲಿ ಕೊಲ್ಲಮೊಗ್ರು ಗ್ರಾಮದ ಮಾಯಿಲ ಮನೆಯ ಕುಮಾರ್ (46) ಗಾಯಗೊಂಡು ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮೇ 21ರಂದು ಕುಮಾರ್ ಅವರ ಮನೆಗೆ ಕೊಲ್ಲಮೊಗ್ರು ಗ್ರಾಮದ ಕಟ್ಟ ನಿವಾಸಿ ಮಣಿಕಂಠ ಬಂದಿದ್ದು, ವಿಚಾರ ತಿಳಿದ ಕುಮಾರ್ ಮಣಿಕಂಠನಿಗೆ “ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಬಂದಿರುವುದು ಯಾಕೆ’ ಎಂದು ಕೇಳಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮೇ 27ರಂದು ಮಣಿಕಂಠ, ಕುಮಾರ್ ಅವರನ್ನು ಮನೆಗೆ ಕರೆದು ಮೊನ್ನೆಯ ವಿಷಯವನ್ನು ಮಾತುಕತೆಯಲ್ಲಿ ಮುಗಿಸುವ ಎಂದು ಹೇಳಿದ್ದು, ಅದರಂತೆ ಬೆಳಗ್ಗೆ ಆತನ ಮನೆಗೆ ತೆರಳಿದ ವೇಳೆ ಸತೀಶ, ಸುಂದರ, ದುರ್ಗಾದಾಸ್ ಬಂಬಿಲ ಎಂಬವರಿದ್ದು, ಕುಮಾರ್ ಅವರನ್ನು ನೋಡಿದ ಕೂಡಲೇ ಅವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದರು.
ಆಗ ಮಣಿಕಂಠ ದೊಣ್ಣೆ ಅಥವಾ ಕತ್ತಿಯನ್ನು ಹಿಡಿದುಕೊಂಡು ಕುಮಾರ್ ಅವರ ಎಡ ಕಿವಿಯ ಭಾಗಕ್ಕೆ ಹೊಡೆದು, ಮುಂದಕ್ಕೆ ನನ್ನ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.