ಆಳಂದ: ವಿದ್ಯಯೊಂದಿಗೆ ವಿನಯ ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಅವರಾದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಡಾ| ಬಿ.ಆರ್. ತಳವಾರ ಹೇಳಿದರು.
ತಾಲೂಕಿನ ಬೆಳಮಗಿ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ದಶಮಾನೋತ್ಸವ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸರ್ಕಾರ ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕವಾಗಿ ಮೇಲೆತ್ತಲು ಹಲವಾರು ಯೋಜನೆ ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಇವುಗಳ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಹೆಚ್ಚು ಅಂಕ ಪಡೆದು ಉನ್ನತ ಗುರಿ ಸಾಧಿಸುವ ಮೂಲಕ ತಂದೆ, ತಾಯಿ, ಗ್ರಾಮ ಹಾಗೂ ತಾಲೂಕು, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು. ಬಿಸಿಎಂ ಜಿಲ್ಲಾ ಅಧಿಕಾರಿ ಮಹಿಬೂಬ್ ಪಾಶಾ ಮಾತನಾಡಿ, ಇಲಾಖೆ ಅಡಿ ನಡೆಯುವ ಶಾಲೆಗಳಿಗೆ ಯಾವುದೇ ತೊಂದರೆ ಆಗದಂತೆ ಶಿಕ್ಷಕರು, ವಸತಿ ಸೇರಿ ಹಲವು ಸೌಲಭ್ಯ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂಥ ಅವಕಾಶ ಸದ್ಬಳಕೆ ಮಾಡಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಜಿಪಂ ಅಧ್ಯಕ್ಷ ಸುವರ್ಣ ಎಚ್. ಮಲಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಅಣವೀರ ಹರಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚಂದಗರಶೆಟ್ಟಿ ಇಮಡೆ, ಗ್ರಾಮದ ಕಲ್ಯಾಣರಾವ ಮಾಲಿಪಾಟೀಲ, ಬಸವರಾಜ ಪಾಟೀಲ, ಅಂಬರಾಯ ಬೆಳಮಗಿ, ಧರ್ಮಾ ಬಂಗರಗಾ ಸೇರಿ ಚುನಾಯಿತ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಪಾಲಕರು ಮತ್ತು ಗ್ರಾಮದ ಶಿಕ್ಷಣ ಪ್ರೇಮಿಗಳು ಪಾಲ್ಗೊಂಡಿದ್ದರು.
ಕಳೆದ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಭಾಗ್ಯಶ್ರೀ ಮಲ್ಲಿಕಾರ್ಜುನ ಅವರಿಗೆ ಗ್ರಾಮದ ಧ್ಯಾನಭೂಮಿ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಅಂಬರಾಯ ಬೆಳಮಗಿ ಅವರು 1 ಸಾವಿರ ರೂ. ಬಹುಮಾನ ನೀಡಿ ಸನ್ಮಾನಿಸಿದರು. ಇದೇ ವೇಳೆ ಪ್ರತಿ ವರ್ಷ ಅತಿ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಹಿಂದಿನಂತೆ ಸಾವಿರ ರೂ. ಬಹುಮಾನ ನೀಡಿದಂತೆ ಮುಂದೆಯೂ ನೀಡಲಾಗುವುದು ಎಂದು ಹೇಳಿದರು. ಶಿಕ್ಷಕ ಹಣಮಂತರಾವ ನಿರೂಪಿಸಿದರು. ಶಿಕ್ಷಕ ಪ್ರದೀಪ ಸ್ವಾಗತಿಸಿದರು.