ಬೈಲಹೊಂಗಲ: ಪಟ್ಟಣದ ಶಾಖಾ ಮೂರುಸಾವಿರ ಮಠದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿಯವರು ಶ್ರೀಮಠದ ಪೀಠಾಧಿಕಾರಿ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ಸಂಸ್ಥೆಯ ಅಧಿಕಾರ ಹಸ್ತಾಂತರಿಸಲು ಹಿಂದೇಟು ಹಾಕುತ್ತಿರುವ ಕುರಿತು ಚರ್ಚಿಸಲು ಕರೆದ ಸಾರ್ವಜನಿಕರ ಸಭೆಯಲ್ಲಿ ಬುಧವಾರ ದಿ.17 ರಂದು ಬೈಲಹೊಂಗಲ ಬಂದ್‌ಗೆ ಕರೆ ನೀಡಿ, 10 ಗಂಟೆಗೆ ಶ್ರೀಮಠದಲ್ಲಿ
ಸೇರಿ ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಶ್ರೀಮಠದಲ್ಲಿ ನಡೆದ ಸಭೆಯಲ್ಲಿ ಮುರಗೋಡ ನೀಲಕಂಠ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ ಮಾತನಾಡಿ, ಗಂಗಾಧರ ಶ್ರೀಗಳು ಲಿಂಗೈಕ್ಯರಾದ ನಂತರ ನಾಡಿನ ಮಠಾಧಿಶರು, ಹಿರಿಯರ ಸಮ್ಮುಖದಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಅವರನ್ನು ಶ್ರೀಮಠಕ್ಕೆ ಪೀಠಾ ಧಿಕಾರಿಯನ್ನಾಗಿ ನೇಮಿಸಿ, ಅವರು ವಿದ್ಯಾಭ್ಯಾಸ ಮುಗಿಸಿ, ಪ್ರಬುದ್ದತೆಗೆ ಬರುವವರೆಗೆ ಸಂಸ್ಥೆಯ ಜವಾಬ್ದಾರಿಯನ್ನು ಆಡಳಿತ ಮಂಡಳಿಗೆ ವಹಿಸಿಕೊಡಲಾಗಿತ್ತು.
ಆಡಳಿತ ಮಂಡಳಿಯ ಐವರು ರಾಜೀನಾಮೆ ಪತ್ರ ನೀಡಿದ್ದಾರಾದರೂ ಕಾರ್ಯಾಧ್ಯಕ್ಷ ಸಿ.ಎಸ್. ಸಾಧುವನರ ಅವರು ಮುಖಂಡರ ಮಾತಿಗೆ ಸ್ಪಂದಿಸದಿರುವುದರಿಂದ ಸೇರಿದ ಜನಸ್ತೋಮದ ನಿರ್ಧಾರದಂತೆ ಬೈಲಹೊಂಗಲ ಬಂದ್ ಗೆ ಕರೆ ನೀಡಿ ಹೋರಾಟ ಮಾಡಲು ನಿರ್ಧರಿಸಲಾಗುತ್ತಿದೆ. ಶಾಂತಯುತವಾಗಿ ಬಂದ್ ಮಾಡಿ ಹೋರಾಟ ಮಾಡೋಣ ಎಂದರು. ಮುಖಂಡ ಶಿವರಂಜನ ಬೊಳನ್ನವರ ಮಾತನಾಡಿ, ಸಂಸ್ಥೆ ಅಭಿವೃದ್ದಿಗಾಗಿ ಪ್ರಭುನೀಲಕಂಠ ಶ್ರೀಗಳಿಗೆ ಸಂಸ್ಥೆಯ ಅಧಿ ಕಾರ ವಹಿಸಿಕೊಡಲು ಜಯ ಸಿಗುವವರೆಗೆ ಹೋರಾಟ ಮಾಡೋಣ ಎಂದರು.
ಸಿ.ಆರ್. ಪಾಟೀಲ, ಮಹಾಂತೇಶ ಮು. ಮೆಟಗುಡ್ಡ, ಮಹಾಂತೇಶ ಮತ್ತಿಕೊಪ್ಪ, ರುದ್ರಪ್ಪ ಹೊಸಮನಿ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಶಿವಾನಂದ ಇಂಚಲ, ಎಸ್.ಡಿ. ಗಂಗನ್ನವರ, ಬಸವರಾಜ ಪುಟ್ಟಿ, ಸೋಮಲಿಂಗ ಮೆಳ್ಳಿಕೇರಿ, ಬಾಬುಸಾಬ ಸುತಗಟ್ಟಿ ಹಾಗೂ ಅನೇಕ ಮುಖಂಡರು ಮಾತನಾಡಿದರು.
ಪ್ರಭುನೀಲಕಂಠ ಸ್ವಾಮೀಜಿ, ಹಿರಿಯರಾದ ಶಂಕ್ರೆಪ್ಪ ಸಿದ್ನಾಳ, ಶಂಕ್ರೆಪ್ಪ ತುರಮರಿ, ಬಸವರಾಜ ಕೌಜಲಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ರಾಜು ಜನ್ಮಟ್ಟಿ, ಸಂಸ್ಥೆಯ ನಿರ್ದೇಶಕರಾದ ವೀರುಪಾಕ್ಷಯ್ಯ ಕೋರಿಮಠ, ಎಸ್.ಎಸ್. ಸಿದ್ನಾಳ, ಮುಖಂಡರಾದ ತಿಪ್ಪಣ್ಣ ಬಿಳ್ಳೂರ, ರಾಜಶೇಖರ ಮೂಗಿ, ಈಶ್ವರ ಕೊಪ್ಪದ, ಶಿವಬಸಪ್ಪ ತುರಮರಿ, ಗುರು ಮೆಟಗುಡ್ಡ, ಕುಮಾರ ದೇಶನೂರ, ಎಸ್.ಎಫ್. ಹರಕುಣಿ,
ಮಹಾಂತೇಶ ಅಕ್ಕಿ, ಈರಣ್ಣ ಬೇಟಗೇರಿ, ರಾಚಪ್ಪ ಬೋಳತ್ತಿನ, ಮಡಿವಾಳಪ್ಪ ಹೋಟಿ, ಪ್ರಮೋದಕುಮಾರ ವಕ್ಕುಂದಮಠ, ಸುಭಾಷ ತುರಮರಿ, ಬಿ.ಬಿ. ಗಣಾಚಾರಿ, ಶಿವಾನಂದ ಕೋಲಕಾರ, ಇತರರು ಇದ್ದರು.
ಹೋರಾಟಕ್ಕೆ ಕರವೇ, ಪ್ರವೀಣ ಶೆಟ್ಟಿ ಬಣದ ಕರವೇ, ನವ ನಿರ್ಮಾಣ ಪಡೆ, ಜಯ ಕರ್ನಾಟಕ, ಕರುನಾಡು ಸೇನೆ, ದಲಿತ ಸಂಘರ್ಷ ಸಮಿತಿ ಸೇರಿ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದವು. ಪಟ್ಟಣ ಸೇರಿ, ಹೊಸೂರ, ಬುಡರಕಟ್ಟಿ, ಪಟ್ಟಿಹಾಳ, ಸಂಪಗಾಂವ, ತಿಗಡಿ ಗ್ರಾಮಗಳ ಭಕ್ತರು ಇದ್ದರು.