Advertisement

ಗಿಡ ಬೆಳೆಸುವ ಪ್ರವೃತ್ತಿ ಅಳವಡಿಸಿಕೊಳ್ಳಲು ಕರೆ

04:15 PM Apr 25, 2017 | Team Udayavani |

ಕಲಬುರಗಿ: ಪ್ರಪಂಚದಾದ್ಯಂತ ಇರುವ ಎಲ್ಲ ಜೀವಿಗಳಿಗೆ ಜೀವನ ನಿರ್ವಹಿಸಲು ಬೇಕಾಗಿರುವ ಮುಖ್ಯವಾದ ಅಂಗ ಪ್ರಕೃತಿ ಸೃಷ್ಟಿಸಿರುವ ಪರಿಸರವನ್ನೇ ನಾಶ ಮಾಡಿ ತೊಂದರೆಗೊಳಗಾಗುತ್ತಿದ್ದು, ಪ್ರತಿಯೊಬ್ಬ ವ್ಯಕ್ತಿ ತನಗಿರುವ ಅವಕಾಶ ಬಳಸಿಕೊಂಡು ತಮಗೆ ದೊರೆಯುವ ಸ್ಥಳದಲ್ಲಿ ವರ್ಷಕ್ಕೆ ಒಂದು ಗಿಡವನ್ನಾದರೂ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು. 

Advertisement

ನಗರದ ಉಚ್ಚ ನ್ಯಾಯಾಲಯ ಪೀಠದ ಕ್ಲಬ್‌ ಹೌಸ್‌ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಪೀಠ, ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ ಕಲಬುರಗಿ ಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಗಿಡ ನೆಡುವುದರಿಂದ ಮುಂಬರುವ ದಿನಗಳಲ್ಲಿ ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಸಮರ್ಥವಾದ ಜೀವನ ನಿರ್ವಹಿಸುವ ಅವಕಾಶ ನೀಡಿದಂತಾಗುತ್ತದೆ. ಅದೇ ರೀತಿ ಪ್ರತಿಯೊಬ್ಬರೂ “ವೃಕ್ಷೊ ರಕ್ಷಿತೊ ರಕ್ಷಿತಃ’ ಎಂಬ ಶ್ಲೋಕ ನೆನಪಿಸಿಕೊಂಡು ಪ್ರತಿಯೊಬ್ಬರೂ ಸಸಿ ನೆಡುವುದಲ್ಲದೇ, ಅದನ್ನು ಒಂದು ಹಂತದವರೆಗೆ ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. 

ಕಲಬುರಗಿ ಪೀಠದ ಮತ್ತೋರ್ವ  ನ್ಯಾಯಮೂರ್ತಿ ಬಿ. ಎ. ಪಾಟೀಲ ಮಾತನಾಡಿ, ಪಕ್ಷಿ ಸಂಕಲುಗಳು ಜೀವನ ನಿರ್ವಹಿಸಲು ಉತ್ತಮ ಪರಿಸರ ಮತ್ತು ಅದರಂತೆ ಉತ್ತಮವಾದ ಗಾಳಿ ಪಡೆಯಲು ಗಿಡ ಮರಗಳು ಅವಶ್ಯಕ. ಅರಳಿ ಮರದ ಪ್ರದಕ್ಷಿಣೆ ಮಾಡಬೇಕು ಎಂದು ಹಿರಿಯರು ಹೇಳುತ್ತಿದ್ದರು.

ಅರಳಿ ಮರ ವಿಶಾಲವಾಗಿ ಬೆಳೆಯುವುದರ ಜತೆಯಲ್ಲಿ ಉತ್ತಮ ಗಾಳಿ ಮತ್ತು ಹೆಚ್ಚು ಆಮ್ಲಜನಕವ ಬಿಡುಗಡೆ ಮಾಡುತ್ತದೆ. ಇದರಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಆದ್ದರಿಂದ ಅವಕಾಶ ಸಿಕ್ಕ ಕಡೆ ಅರಳಿ ಮರ ಬೆಳೆಸುವುದನ್ನು ನಾವೆಲ್ಲರೂ ಪರಿಪಾಲಿಸಬೇಕು ಎಂದು ಹೇಳಿದರು. 

Advertisement

ಕಲಬುರಗಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಪರಿಸರ ಮತ್ತು ಗಿಡ ಮರಗಳ ಮಹತ್ವದ ಬಗ್ಗೆ ವಿವರಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ಹೆಚ್ಚುವರಿ ವಿಲೇಖನಾಧಿಕಾರಿ ಎಸ್‌. ವೈ. ವಟವಟಿ ಸ್ವಾಗತಿದರು.

ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಎಸ್‌. ಆರ್‌. ಮಾಣಿಕ್ಯ ವಂದಿಸಿದರು. ಕಲಬುರಗಿ ಪೀಠದ ಅಧಿಧಿಕಾರಿಗಳು, ಸಿಬ್ಬಂದಿ ವರ್ಗದವರು ಸೇರಿದಂತೆ ಸುಮಾರು 150 ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ನ್ಯಾಯಾಲಯ ಆವರಣದಲ್ಲಿ ಸಸಿ ನೆಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next