ವಾಷಿಂಗ್ಟನ್: ವಲಸೆ ವಿರೋಧಿ ನೀತಿಯಿಂದ ವಿಶ್ವಾದ್ಯಂತ ಟೀಕೆಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಆಸ್ಟ್ರೇಲಿಯ ಪ್ರಧಾನಿ ವಿರುದ್ಧ ಮುನಿದು, ಫೋನು ಕುಕ್ಕಿದ್ದಾರೆ. ಅಮೆರಿಕ ಅಧ್ಯಕ್ಷರಾದ ಮೇಲೆ ನಿತ್ಯ ಪ್ರಮುಖ ರಾಷ್ಟ್ರಗಳ ಮುಖಂಡರ ಜತೆ ಟ್ರಂಪ್ ದೂರ ವಾಣಿಯಲ್ಲಿ ಸಂಪರ್ಕಿಸುತ್ತಿದ್ದರು. ಆಸ್ಟ್ರೇಲಿಯ ಪ್ರಧಾನಿ ಮ್ಯಾಲ್ಕಮ್ ಟರ್ನ್ಬುಲ್ ಜತೆಗೆ ಮಾತು ಮುಗಿಸಿ, ಸಿಟ್ಟಿನಿಂದ ಫೋನನ್ನು ಕೆಳಗಿಟ್ಟು ಅವರ ವಿರುದ್ಧ ಕೋಪ ಪ್ರದರ್ಶಿಸಿದ್ದಾರೆ. “ಇದುವರೆಗಿನ ಕೆಟ್ಟ ಮಾತುಕತೆ’ ಎಂದು ಟ್ರಂಪ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಟರ್ನ್ಬುಲ್ ಸರಕಾರ ಮಹತ್ವದ ಒಪ್ಪಂದವೊಂದಕ್ಕೆ ಸಹಿಹಾಕಿತ್ತು. ಅದ ರಂತೆ, ಆಸ್ಟ್ರೇಲಿಯದ ಸಾಗರ ಬದಿಯ ಪಪುವಾ ನ್ಯೂಗಿನಿಯಾ ಮತ್ತು ನೌರು ಪ್ರದೇಶದ ಅಕ್ರಮ 1,250 ವಲಸಿಗರಿಗೆ ಅಮೆರಿಕ ನೆಲೆ ಕೊಡುವುದು, ಗ್ವಾಟೆಮಾಲ, ಎಲ್ ಸಲ್ವಡಾರ್ ಮತ್ತು ಹೊಂಡು ರಾಸ್‌ಗೆ ಸೇರಿದ ಅಕ್ರಮ ವಲಸಿಗರಿಗೆ ಆಸ್ಟ್ರೇಲಿಯ ವಸತಿ ಕೊಡಬೇಕಿತ್ತು. ಮಾತುಕತೆ ವೇಳೆ ಟರ್ನ್ ಬುಲ್ ಇದನ್ನು ಪ್ರಸ್ತಾವಿಸಿದಾಗ ಟ್ರಂಪ್, “ಇದೊಂದು ಮೂರ್ಖ ಒಪ್ಪಂದ. ಆಸ್ಟ್ರೇಲಿಯ ಮುಂದೆ ಬೊಸ್ಟಾನ್ ಬಾಂಬರ್ಸ್‌ಗಳನ್ನು ಕಳುಹಿಸ ಬಹುದು’ ಎಂದು ಆಕ್ಷೇಪಿಸಿದ್ದಾರೆ.
ಅಮೆರಿಕ ಮತ್ತು ಆಸ್ಟ್ರೇಲಿಯ ನಡುವಿನ ಸಂಬಂಧ ಇದುವರೆಗೆ ಚೆನ್ನಾಗಿಯೇ ಇದ್ದು, ಇರಾಕ್ ಮತ್ತು ಅಫ^ನ್ ಯುದ್ಧದಲ್ಲಿಯೂ ಆಸ್ಟ್ರೇಲಿಯ ತನ್ನ ಸೇನಾ ನೆರವು ನೀಡಿತ್ತು. ರಾಜತಾಂತ್ರಿಕ ವಿಚಾರದಲ್ಲೂ ಎರಡೂ ದೇಶಗಳು ಮಹತ್ವದ ಆಂತರಿಕ ವಿಚಾರಗಳನ್ನು ಮುಕ್ತವಾಗಿಯೇ ಹಂಚಿಕೊಂಡಿವೆ. ಮುಂದಿನ ದಿನಗಳಲ್ಲಿ ಟ್ರಂಪ್ ಈ ಸಂಬಂಧಕ್ಕೆ ಎಳ್ಳುನೀರು ಬಿಡಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಶ್ವೇತಭವನದ ಅಧಿಕಾರಿಗಳ ಪ್ರಕಾರ ಶನಿವಾರ ನಡೆದಿದ್ದ ದೂರವಾಣಿ ಸಂಭಾಷಣೆ ಕೇವಲ 25 ನಿಮಿಷಕ್ಕೆ ಸೀಮಿತವಾಗಿತ್ತು. ಆದರೆ, ಮಾತುಕತೆ ಒಂದು ತಾಸಿನ ತನಕ ಸಾಗಿದೆ. ಅದೇ ದಿನ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ ಪೆನಾ ನಿಟೋ ಸಹಿತ ನಾಲ್ಕು ರಾಷ್ಟ್ರಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದರು.
ಆಸ್ಟ್ರೇಲಿಯ ಪ್ರಧಾನಿ ಸಿರಿಯಾ ವಲಸೆ ನಿರ್ಬಂಧ ವಿಚಾರ ಪ್ರಸ್ತಾವಿಸುತ್ತಿದ್ದಂತೆ, ಟ್ರಂಪ್ ಅವರು ಒಬಾಮಾ ಅವರ ಹಿಂದಿನ ಒಪ್ಪಂದದ ವಿಚಾರವನ್ನು ಎತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಟ್ರಂಪ್ ಹೀಗೆ ವರ್ತಿಸಿದ್ದಾರೆ ಎಂದು ಆಸ್ಟ್ರೇಲಿಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ದಲ್ಲಿ ಇಸ್ಲಾಮ್ ವಲಸಿಗರು ಬೇರೇನೇ ಕೃತ್ಯ ಎಸಗಿರಬಹುದು. ಆದರೆ, ಆಸ್ಟ್ರೇಲಿಯದ ವಲಸಿಗರು ಅಂಥ ಪ್ರಮಾದಗಳನ್ನು ಸೃಷ್ಟಿಸಿಲ್ಲ ಎಂದು ಹೇಳಿವೆ.
“ನಮ್ಮ ನಡುವಿನ ಸಂಭಾಷಣೆ ತೀರಾ ಖಾಸಗಿ. ಅದನ್ನು ಬಹಿರಂಗಪಡಿಸುವ ಉದ್ದೇಶ ನನಗಿಲ್ಲ. ಮುಂದೆ ಅಮೆರಿಕದ ಜತೆಗೆ ಸಂಬಂಧ ಚೆನ್ನಾಗಿಯೇ ಇರಲಿದೆ’ ಎಂದು ಟರ್ನ್ ಬುಲ್ ಈ ವಿವಾದಕ್ಕೆ ತೇಪೆ ಹಚ್ಚಲೆತ್ನಿಸಿದ್ದಾರೆ. ಇತ್ತ ವೈಟ್‌ಹೌಸ್ ಅಧಿಕಾರಿಗಳೂ “ಆಸ್ಟ್ರೇಲಿಯ ಮಾತ್ರವಲ್ಲ, ವಲಸೆ ವಿರೋಧಿ ನೀತಿ ಪ್ರಶ್ನಿಸಿದ ಇತರ ರಾಷ್ಟ್ರಾಧ್ಯಕ್ಷರೊಂದಿಗೂ ಟ್ರಂಪ್ ಹೀಗೆ ಕೋಪ ಪ್ರಕಟಿಸಿದ್ದಾರೆ’ ಎಂದು ಸಮರ್ಥಿಸಿಕೊಂಡಿದ್ದಾರೆ.