ಬೆಂಗಳೂರು: ವಾಯು ನೆಲೆ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಶನಿವಾರ ನಡೆದ ಬೆಂಕಿ ದುರಂತ ಸಂಬಂಧ ಪೊಲೀಸ್ ಇಲಾಖೆ ತೆರೆದಿದ್ದ ಸಹಾಯವಾಣಿಗೆ ಇದುವರೆಗೂ 210ಕ್ಕೂ ಹೆಚ್ಚು ಕರೆಗಳು ಬಂದಿವೆ.
ದುರ್ಘಟನೆಯಲ್ಲಿ ಸುಟ್ಟು ಕರಕಲಾದ ಕಾರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಲೀಕರಿಂದ ಪಡೆದು, ವಿಮೆ ಹಣ ಪಡೆಯಲು ಅಗತ್ಯವಿರುವ ಪ್ರಮಾಣ ಪತ್ರ ವಿತರಿಸಲಾಯಿತು. ಸೋಮವಾರವೂ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಪೊಲೀಸರು ತಿಳಿಸಿದರು.
ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಅವಘಡಕ್ಕೆ ಕಾರಣ ಏನೆಂಬುದು ಎಫ್ಎಸ್‌ಎಲ್ ವರದಿ ಬಳಿಕ ತಿಳಿಯಲಿದೆ ಎಂದು ಪೊಲೀಸರು ಹೇಳಿದರು.
ಸಾರಿಗೆ ಇಲಾಖೆಯ 60 ಅಧಿಕಾರಿಗಳು ಕಾರುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ಎಂಟು ವಿಮಾ ಕಂಪನಿ ಪ್ರತಿನಿಧಿಗಳು ಕಾರು ಮಾಲೀಕರಿಗೆ ಅಗತ್ಯ ಮಾಹಿತಿ ನೀಡಿದ್ದಾರೆ. ದಾಖಲೆಗಳನ್ನು ಸಲ್ಲಿಸಿದರೆ 3-4 ವಾರಗಳಲ್ಲಿ ವಿಮಾ ಪ್ರಕ್ರಿಯೆ ಪೂರ್ಣಗೊಳಿಸಿ ಹಣ ಜಮೆ ಮಾಡುವುದಾಗಿ ತಿಳಿಸಿದ್ದಾರೆ.
ಅಕ್ರಮ ಪ್ರವೇಶಕ್ಕೆ ಯತ್ನ – ಎಚ್ಚರಿಕೆ: ಏರ್ ಶೋ ವೀಕ್ಷಿಸಲು ಅಕ್ರಮ ಪ್ರವೇಶಕ್ಕೆ ಮುಂದಾದ 200ಕ್ಕೂ ಹೆಚ್ಚು ಮಂದಿಗೆ ಭಾರತೀಯ ವಾಯು ಸೇನೆ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಪ್ರದರ್ಶನ ವೀಕ್ಷಣೆಗೆ ಅಧಿಕೃತವಾಗಿ ಪಾಸ್ ವಿತರಿಸಲಾಗಿದೆ.
ಈ ಪೈಕಿ ವಿದೇಶಿಗರು ಹಾಗೂ ನೆರೆ ರಾಜ್ಯಗಳಿಂದ ಆಗಮಿಸುವವರಿಗೆ ವಿತರಿಸಿರುವ ಪಾಸ್‌ಗಳಲ್ಲಿ ವ್ಯಕ್ತಿಯ ಭಾವಚಿತ್ರ ಅಂಟಿಸಿಲ್ಲ. ಅಂತಹ ಪಾಸ್‌ಗಳನ್ನು ಸಂಗ್ರಹಿಸಿಕೊಂಡಿರುವ ಕೆಲವರು, ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದರು.
ಗೇಟ್ 1, 2 ಮತ್ತು 2ಬಿಯಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಅನುಮಾನಗೊಂಡು ತಪಾಸಣೆ ನಡೆಸಿದಾಗ ನಕಲಿ ಪಾಸ್‌ಗಳು ಪತ್ತೆಯಾಗಿವೆ. ಬಳಿಕ ಚುನಾವಣಾ ಗುರುತಿನ ಚೀಟಿ, ಚಾಲನಾ ಪರವಾನಗಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಅಕ್ರಮ ಪ್ರವೇಶಕ್ಕೆ ಯತ್ನಿಸಿರುವುದು ಖಚಿತವಾಗಿದೆ.