ಗೋಕಾಕ: ಜಗದೀಶ ಶೆಟ್ಟರ ಅವರು ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ರೈತರ ಹಿತಕ್ಕಾಗಿ ಜಾರಿಗೊಳಿಸಿದ್ದ ಎಸ್‌ಎಪಿ ಕಾನೂನಿಗೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಶಕ್ತಿ ತುಂಬಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.
ಕೇಂದ್ರ ಸರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿದಾಗ ಅದು ರೈತರಿಗೆ ಹಾನಿ ಮಾಡುತ್ತಿದ್ದರೆ ಎಸ್‌ಎಪಿ ಪ್ರಕಾರ ಅದನ್ನು ಸರಿದೂಗಿಸಲು ಸಾಧ್ಯ. ಸರಕಾರಕ್ಕೆ ರೈತರ ಬೆಳೆಗಳ ಸಂಬಂಧಿಸಿದಂತೆ ವೈಜ್ಞಾನಿಕ ಮಾನದಂಡವೇ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ 12 ನೀಡಿದರೂ ಕಡಿಮೆ ಬೆಲೆ ನೀಡಲಾಗುತ್ತಿದೆ. ಇಳುವರಿ ಪ್ರಕಾರ ಕಬ್ಬಿಗೆ ಯೋಗ್ಯ ನೀಡುತ್ತಲೇ ಇಲ್ಲ. ಜಿಲ್ಲೆಯ ಕೆಲ ಸಕ್ಕರೆ ಕಾರಖಾನೆಗಳು ರೈತರ ಬಿಲ್ ಬಾಕಿ ಉಳಿದಿದ್ದರೂ ಸರಕಾರದ ವರದಿಯಲ್ಲಿ ಎಲ್ಲ ಸಕ್ಕರೆ ಕಾರಖಾನೆಗಳು ರೈತರ ಬಿಲ್ ಬಾಕಿ ಇಲ್ಲವೆಂದು ಹೇಳುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಅಧಿಕಾರಿ ವರ್ಗ ಹಾಗೂ ಉದ್ಯೋಗಪತಿಗಳು ಒಂದಾಗಿ ರೈತರನ್ನು ವಂಚಿಸುತ್ತಿದ್ದಾರೆ ಎಂದೂ ದೂರಿದರು.
ಮಹದಾಯಿ ಯೋಜನೆ ಕುರಿತು ಮಾತನಾಡಿದ ಅವರು, ಮಹದಾಯಿ ಯೋಜನೆ ಬಗ್ಗೆ ನ್ಯಾಯ ಮಂಡಳಿ ತೀರ್ಪು ನೀಡಿದ್ದು ರಾಜ್ಯದ ಪಾಲಿನ ನೀರಿನ ಬಳಕೆಗಾಗಿ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ನಂತರ ಮೇಲ್ಮನವಿ ಸಲ್ಲಿಸಬೇಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಸತತ ಬರಗಾಲ ಬಿದ್ದರೂ ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಏನೂ ಉಪಯೋಗವಿಲ್ಲ. ಅದು ವಿಮಾ ಕಂಪನಿಗಳಿಗೆ ಮಾತ್ರ ಲಾಭದಾಯಕ ಎಂದು ಹೇಳಿದ ಕೋಡಿಹಳ್ಳಿ, ಪ್ರಸ್ತುತ ರಾಜ್ಯ ರಾಜಕಾರಣದ ಬಗ್ಗೆ ಉತ್ತರಿಸಿ, ಇಡೀ ದೇಶವೇ ಕರ್ನಾಟಕದ ಬಗ್ಗೆ ಹೇಸಿಗೆ ಪಡುವಂತಾಗಿದ್ದು, ಇಂಥ ಹೀನ ರಾಜಕೀಯ ನಡೆಯಬಾರದು ಎಂದು ಉತ್ತರಿಸಿದರು.
Advertisement
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಹಲ್ಲಿಲ್ಲದ ಹಾವಿನಂತಾಗಿರುವ ಎಸ್‌ಎಪಿ ಕಾನೂನಿಗೆ ಹೆಚ್ಚಿನ ಅಧಿಕಾರ ನೀಡಿ ಸಬಲಗೊಳಿಸಬೇಕೆಂದು ಹೇಳಿದರು.
Related Articles
Advertisement
ರೈತರು ಹನಿ ನೀರಾವರಿ ಕೈಗೊಳ್ಳುವ ಜೊತೆಗೆ ಬರಿಯ ಕಬ್ಬು ಬೆಳೆಯದೇ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಶಿ ಗದಾಡಿ, ಗಣಪತಿ ಇಳಿಗೇರ, ಮಂಜುನಾಥ ಪೂಜೇರಿ, ಮುತ್ತೆಪ್ಪ ಬಾಗನ್ನವರ, ಅಬ್ಬಣ್ಣಿ ಶಿವಪ್ಪ, ಭಕ್ತರಹಳ್ಳಿ ಭೈರೇಗೌಡ, ಗೋಪಾಲ ಕುಕನೂರ, ಭರಮು ಖೆಮಲಾಪೂರೆ, ಇರ್ಫಾನ್ ಜಮಾದಾರ ಇದ್ದರು.
ಕಬ್ಬು ಬಿಲ್ ಬಾಕಿ: ವಿಚಾರಣೆ ಮುಂದೂಡಿಕೆ:
ಜು. 31 ರಂದು ನಿಗದಿ ಪಡಿಸಿದ ಹಿಂದಿನ ವರ್ಷದ ಕಬ್ಬು ಬಾಕಿ ಪಾವತಿ ಮಾಡದಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಬ್ಬು ಬೆಳೆಗಾರರು ಸಲ್ಲಿಸಿರುವ ಅರ್ಜಿಗಳ ಶಾಸನ ಬದ್ಧ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಕೆ.ಜಿ. ಶಾಂತರಾಮ್ ತಿಳಿಸಿದ್ದಾರೆ. ಜೂ.25 ರಂದು ಪ್ರಥಮ ಶಾಸನಬದ್ಧ ವಿಚಾರಣೆಯನ್ನು ನಡೆಸಲಾಗಿದೆ. ನಂತರದ ವಿಚಾರಣೆಯನ್ನು ಜು. 31 ರಂದು ನಿಗದಿಗೊಳಿಸಲಾಗಿತ್ತು. ಆದರೆ ಕರ್ನಾಟಕ ವಿಧಾನ ಮಂಡಲದ ಅಧಿವೇಶನ ನಡೆದಿರುವುದರಿಂದ ಜು.31 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲಾಗಿದ್ದು, ಮುಂದಿನ ವಿಚಾರಣೆ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಸಕ್ಕರೆ ನಿರ್ದೇಶಕರು ತಿಳಿಸಿದ್ದಾರೆ.