ಪಡುಬಿದ್ರಿ: ಸುಮಾರು 70 ಮನೆಗಳಿರುವ ನಡ್ಸಾಲು ಗ್ರಾಮದ ಒಂದನೇ ವಾರ್ಡ್‌ನ ಕಂಚಿನಡ್ಕ ವ್ಯಾಪ್ತಿಯಲ್ಲಿನ ಐದಾರು ಗ್ರಾಮೀಣ ಕಚ್ಚಾ ರಸ್ತೆಗಳು 40 ವರ್ಷ ಕಳೆದರೂ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ.
ಈ ಕುರಿತು ರಸ್ತೆ ಅಭಿವೃದ್ಧಿಗಾಗಿ ಗ್ರಾ.ಪಂ. ಸಹಿತ ವಿವಿಧ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ರದೇಶದ ಅಕ್ಕಪಕ್ಕ ಹಲವು ರಸ್ತೆ ಕಾಂಕ್ರೀಟ್‌ಗೊಂಡಿದ್ದರೂ ಈ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇಲ್ಲಿ ನಿರ್ಮಾಣವಾದ ಕೆಲವು ಕಚ್ಚಾ ರಸ್ತೆಗಳಿಗೆ ಜಲ್ಲಿ ಹಾಕಲಾಗಿದೆ. ಇನ್ನು ಕೆಲವು ರಸ್ತೆಗಳಿಗೆ ಚರಂಡಿ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆಲವೆಡೆ ಗಿಡಗಂಟಿ ಬೆಳೆದು ನಡೆದಾಡಲು ಅನನುಕೂಲವಾಗಿದೆ. ಹತ್ತಿರದಲ್ಲಿಯೇ ರಾಘವೇಂದ್ರ ಮಠ, ಪೊಲೀಸ್ ವಸತಿ ಸಂಕೀರ್ಣ, ಶಾಲೆಗಳಿದ್ದು, ದಿನನಿತ್ಯ ಹಲವು ಶಾಲಾ ವಾಹನಗಳು ಇಲ್ಲಿ ಪ್ರಯಾಸಪಟ್ಟು ಇಲ್ಲಿ ಸಾಗಬೇಕಾಗಿದೆ. ಅಟೋ ಚಾಲಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಹೊಂಡ ಮುಚ್ಚಲು ಕ್ರಮ
ಗ್ರಾ. ಪಂ. ಅಧ್ಯಕ್ಷರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ತುರ್ತಾಗಿ ಒಂದೆರಡು ದಿನಗಳಲ್ಲೇ ಜಲ್ಲಿಹುಡಿ ಹಾಕಿ ಈ ಭಾಗದ ರಸ್ತೆಗಳ ಹೊಂಡ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಗ್ರಾ. ಪಂ.ನಲ್ಲಿ ಅನುದಾನದ ಕೊರತೆಯೂ ಇದೆ.
–
ಪಂಚಾಕ್ಷರೀ ಸ್ವಾಮಿ ಕೆರಿಮಠ ,
ಪಿಡಿಒ , ಪಡುಬಿದ್ರಿ ಗ್ರಾ.ಪಂ .