ಹಾನಗಲ್ಲ: ಮುಂಗಾರು ಹಂಗಾಮಿನ ಬೆಳೆವಿಮೆ ತುಂಬುವ ಅವಧಿ ವಿಸ್ತರಿಸುವಂತೆ ಭಾರತೀಯ ಕೃಷಿಕ ರೈತ ಸಂಘಟನೆ ಹಾನಗಲ್ಲ ತಾಲೂಕು ಘಟಕ ತಹಶೀಲ್ದಾರ್ ಅವರ ಮೂಲಕ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದೆ.
ಸೋಮವಾರ ಹಾನಗಲ್ಲಿನಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಹಾಗೂ ಸರಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು ಎಂದು ಆಗ್ರಹಿಸಿದರು.
ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ರೈತರ ಸಭೆ ನಡೆದಾಗ ಕೃಷಿ ಅಧಿಕಾರಿಗಳು ತಾಪಂ ಇಒಗಳು, ಲೀಡ್‌ಬ್ಯಾಂಕ್ ವ್ಯವಸ್ಥಾಪಕರು, ಬಿಇಒ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಆರಕ್ಷಕ ಅಧಿಕಾರಿಗಳು, ವಿದ್ಯುತ್ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಹಾಗಾದಾಗ ಮಾತ್ರ ತಹಶೀಲ್ದಾರ್ ಸಮ್ಮುಖದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ.
ಬೆಳೆಹಾನಿ ಬ್ಯಾಂಕ್‌ಗಳ ಮೂಲಕ ಸಾಲಮನ್ನಾ ವಿಷಯದಲ್ಲಿ ಅನ್ಯಾಯ, ರೈತರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಬಾಳಂಬೀಡ ಏತ ನೀರಾವರಿ ಯೋಜನೆ ಹಾಗೂ ಶಬ್ದ ಮಾಲಿನ್ಯ, ಸಾರ್ವಜನಿಕ ಶಾಂತಿಭಂಗ, ಕಾನೂನು ಪರಿಪಾಲನೆ, ವಿದ್ಯುತ್ ಸಮರ್ಪಕವಾಗಿ ನೀಡುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಅಧಿಕಾರಿಗಳೇ ಇಲ್ಲದಿದ್ದರೆ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಬರೀ ಚರ್ಚೆಗಳಾಗುತ್ತವೆ. ಈ ಬಗ್ಗೆ ತಾಲೂಕು ತಹಶೀಲ್ದಾರರು ಎಲ್ಲ ಅಧಿಕಾರಿಗಳು ರೈತರಿಗೆ ಸಂಬಂಧಿಸಿದ ಸಭೆ ನಡೆದಾಗ ಹಾಜರಾಗುವಂತೆ ಹಾಗೂ ಸೂಕ್ತ ಮಾಹಿತಿ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳು ರೈತ ಮುಖಂಡರಾದ ಎಂ.ಎಸ್.ಪಾಟೀಲ, ಎನ್.ಎಸ್.ಪಡೆಪ್ಪನವರ, ಎಂ.ಸಿ.ಪಾಟೀಲ, ಕುಮಾರಸ್ವಾಮಿ ಹಿರೇಮಠ, ಎಸ್.ಜಿ.ಮಲ್ಲಿಕೇರಿಮಠ, ಪ್ರಕಾಶ ದಾನಪ್ಪನವರ, ಮಹಲಿಂಗಪ್ಪ ಬಿದರಮಳ್ಳಿ, ಯು.ಜಿ. ಕೂಡಲಮಠ, ಜಗದೀಶ ಪಾಟೀಲ, ಚಂದ್ರು ಬೈಲವಾಳ, ಮಂಜಣ್ಣ ಹುಲಿಗಿನಹಳ್ಳಿ, ವೀರಭದ್ರಪ್ಪ, ಶಿವಪುತ್ರಪ್ಪ ಮನ್ನಂಗಿ, ಮಹದೇವಪ್ಪ ಹಾವೇರಿ, ಚನ್ನಬಸಪ್ಪ ಅಂಗಡಿ, ಮಲ್ಲಪ್ಪ ಶಂಕ್ರಪ್ಪನವರ, ಶಿವಾನಂದ ಬೈಲಣ್ಣನವರ, ಬಸವರಾಜ ಮತ್ತೂರ ಹಾಗೂ ಮೊದಲಾದವರು ಇದ್ದರು.