ಬೆಂಗಳೂರು: 2016 ಮತ್ತು 17ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಅಕ್ರಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್.ಮೂರ್ತಿಯವರು ತಮ್ಮ ಅಹವಾಲು ಸಲ್ಲಿಸಲು ವಿಧಾನಸಭೆ ಸಚಿವಾಲಯದ ವಿಶೇಷ ಮಂಡಳಿ ಸಭೆ ಕರೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಭಾಧ್ಯಕ್ಷ, ಸಭಾಪತಿ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, 2016 ಹಾಗೂ 17ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ದುಂದು ವೆಚ್ಚವಾಗಿದೆ ಎಂದು ಸಿಎಜಿ ವರದಿಯಲ್ಲಿ ಯಾವುದೇ ಗಂಭೀರ ಆರೋಪ ಮಾಡದೇ ಇದ್ದರೂ, ಹಾಲಿ ಸಭಾಧ್ಯಕ್ಷರು ಶಾಸಕಾಂಗ ವ್ಯಾಪ್ತಿಗೆ ಒಳಪಡದ ಸರ್ಕಾರದ ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳ ತಂಡವನ್ನು ವಿಶೇಷ ಮಂಡಳಿಯ ಗಮನಕ್ಕೆ ತಾರದೆ, ವಿಶೇಷ ಆಡಿಟ್ ಹೆಸರಿನಲ್ಲಿ ತನಿಖೆ ನಡೆಸಿದ್ದಾರೆ.
ಹಿಂದಿನ ಸಭಾಧ್ಯಕ್ಷರು ಮಾಡಿರುವ ಕಡತಗಳಲ್ಲಿನ ದಾಖಲೆ ಮತ್ತು ಲೆಕ್ಕ ಪತ್ರಗಳನ್ನು ಪಡೆದು ನನ್ನಿಂದ ಯಾವುದೇ ವಿವರಣೆಯನ್ನೂ ಕೇಳದೆ ವಿಶೇಷ ಮಂಡಳಿಯ ಸಹಿ ಪಡೆದು ಅಮಾನತು ಮಾಡಿದ್ದಾರೆ ಎಂದು ಮೂರ್ತಿ ಮನವಿಯಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಸಚಿವಾಲಯದ ವಿಶೇಷ ಮಂಡಳಿಯ ಅನುಮತಿಯನ್ನೂ ಪಡೆಯದೆ ದೋಷಾರೋಪ ಪಟ್ಟಿ ಹೊರಡಿಸಿದ್ದಾರೆ. ದೋಷಾರೋಪ ಪಟ್ಟಿಯನ್ನು ನೀಡುವಂತೆ ಮನವಿ ಮಾಡಿದರೂ, ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಹೇಳಿ, ಕನಿಷ್ಠ ಸಹಜ ನ್ಯಾಯಕ್ಕೂ ಅವಕಾಶ ನೀಡದೆ ನನ್ನ ಸೇವೆಗೆ ಧಕ್ಕೆ ತಂದಿದ್ದಾರೆ.
ಇದರ ಹಿಂದೆ ಸೇವೆಯಲ್ಲಿ ನನಗಿಂತ ಕಿರಿಯರಾದ ವಿಶಾಲಾಕ್ಷಿ ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಮೂರ್ತಿ ಪತ್ರದಲ್ಲಿ ತಿಳಿಸಿದ್ದಾರೆ.