ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ್ದ ಚುನಾವಣೋತ್ತರ ಗಲಭೆ, ಹತ್ಯೆಗಳು, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳನ್ನು ತನಿಖೆಯನ್ನು ಸಿಬಿಐಗೆ ವಹಿಸಿ ಗುರುವಾರ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ.
ಉಳಿದ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ವೇ ಮಾಡಲಿದ್ದು, ಎರಡೂ ಸಂಸ್ಥೆಗಳ ತನಿಖೆಗಳೂ ಕೋರ್ಟ್ ಮೇಲ್ವಿಚಾರಣೆಯಲ್ಲೇ ನಡೆಯಲಿದೆ ಎಂದು ನ್ಯಾಯಪೀಠ ಹೇಳಿದೆ.
ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಕ್ರುದ್ಧಗೊಂಡಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದೆ.
ಇದನ್ನೂ ಓದಿ:ಪ್ರಧಾನಿಯವರ ಜನಪ್ರಿಯತೆಗೆ ಸರಿಸಮಾನರಾದ ನಾಯಕರೇ ವಿರೋಧ ಪಕ್ಷದಲ್ಲಿಲ್ಲ: ಸಚಿವ ಆರ್ ಅಶೋಕ್
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯ ಅನ್ವಯ ಹೈಕೋರ್ಟ್ ಈ ಆದೇಶ ನೀಡಿದೆ. ರಾಜ್ಯ ಸರ್ಕಾರವು ಎಲ್ಲ ಪ್ರಕರಣಗಳ ದಾಖಲೆಗಳನ್ನೂ ಸಿಬಿಐಗೆ ಹಸ್ತಾಂತರಿಸಬೇಕು. ತನಿಖೆಯ ಅವಧಿಯಲ್ಲಿ ಯಾವುದಾದರೂ ಅಥವಾ ಯಾರಾದರೂ ಅಡೆತಡೆ ಉಂಟುಮಾಡಿದಲ್ಲಿ, ಗಂಭೀರವಾಗಿ ಪರಿಗಣಿಸಲಾಗುವುದು ಎಂದೂ ಹೈಕೋರ್ಟ್ ಖಡಕ್ಕಾಗಿ ಸೂಚಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಸೌಗತಾ ರಾಯ್, ಪ್ರತಿಯೊಂದು ಕಾನೂನು ಮತ್ತು ಸುವ್ಯವಸ್ಥೆಯ ವಿಚಾರವೂ ಆಯಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಸಿಬಿಐ ಒಳಗೆ ಬರುವುದು ರಾಜ್ಯದ ಹಕ್ಕುಗಳ ಅತಿಕ್ರಮಣ ಎಂದು ಹೇಳಿದ್ದಾರೆ.