ಕೋಲ್ಕತ : ಅಕ್ಟೋಬರ್ 2ರ ಸೋಮವಾರ ಮುಹರ್ರಂ ದಿನವೂ ಸೇರಿದಂತೆ ಎಲ್ಲ ದಿನಗಳಲ್ಲಿ ದುರ್ಗೆಯ ಮೂರ್ತಿಯ ಜಲಸ್ತಂಭನಕ್ಕೆ ಕಲ್ಕತ್ತ ಹೈಕೋರ್ಟ್ ಇಂದು ಗುರುವಾರ ಅನುಮತಿ ನೀಡಿದೆ.
ದುರ್ಗೆಯ ವಿಗ್ರಹ ವಿಸರ್ಜನೆಗೆ ಸಂಬಂಧಿಸಿ ಮಮತಾ ಬ್ಯಾನರ್ಜಿ ಸರಕಾರ ಹೇರಿರುವ ನಿರ್ಬಂಧಗಳಿಗೆ ಯಾವುದೇ ಆಧಾರ ಇಲ್ಲ ಎಂದು ಕಲ್ಕತ್ತ ಹೈಕೋರ್ಟ್ ಹೇಳಿದೆ.
“ನಿರ್ಬಂಧ ಮತ್ತು ನಿಷೇಧದ ನಡುವೆ ವ್ಯತ್ಯಾಸವಿದೆ. ನೀವು ಯಾವುದೇ ಆಧಾರವಿಲ್ಲದೆ ಅಧಿಕಾರವನ್ನು ಪ್ರಯೋಗಿಸುತ್ತಿದ್ದೀರಿ. ನೀವು ಕೇವಲ ಸರಕಾರ ಆಗಿರುವ ಮಾತ್ರಕ್ಕೆ ಸ್ವೇಚ್ಚಾಚಾರದ ಆದೇಶಗಳನ್ನು ಪಾಸು ಮಾಡಲು ಸಾಧ್ಯವಿಲ್ಲ. ಏನೋ ಅಹಿತಕರ ಘಟನೆಗಳು ಸಂಭವಿಸುವ ಬಗ್ಗೆ ನಿಮಗೆ ಕನಸು ಬೀಳುತ್ತದೆ ಎಂದ ಮಾತ್ರಕ್ಕೆ ನೀವು ನಿರಾಧಾರವಾಗಿ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ’ ಎಂದು ಕಲ್ಕತ್ತ ಹೈಕೋರ್ಟಿನ ಪ್ರಭಾರ ಮುಖ್ಯ ನ್ಯಾಯಾಧೀಶ ರಾಕೇಶ್ ತಿವಾರಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಇತ್ಯರ್ಥ ಪಡಿಸುವ ತಮ್ಮ ಆದೇಶದಲ್ಲಿ ಹೇಳಿದರು.
ಈ ಮೊದಲು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು “ಅಕ್ಟೋಬರ್ 1ರ ಏಕಾದಶಿ ದಿನವೇ ಮುಹರ್ರಂ ಇರುವುದರಿಂದ ಅಂದಿನ 24 ತಾಸುಗಳ ಅವಧಿಯಲ್ಲಿ ಯಾರೂ ದುರ್ಗಾ ವಿಸರ್ಜನೆಯನ್ನು ಕೈಗೊಳ್ಳಬಾರದು. ಮೊಹರ್ರಂ ದಿನದ ಅಂಗವಾಗಿ ಮುಸ್ಲಿಂ ಬಾಂಧವರು ದುಃಖಸೂಚಕ ಮೆರವಣಿಗೆಯನ್ನು ಕೈಗೊಳ್ಳುತ್ತಾರೆ. ಆದುದರಿಂದ ವಿಜಯ ದಶಮಿಯ ಸೆ.30ರ ಸಂಜೆ 6 ಗಂಟೆಯ ಬಳಿಕ ಅಕ್ಟೋಬರ್ 1ರಂದು ದಿನ ಪೂರ್ತಿ ಯಾರೂ ದುರ್ಗಾ ವಿಗ್ರಹ ವಿಸರ್ಜನೆಯನ್ನು ಕೈಗೊಳ್ಳಕೂಡದು. ಅ.2ರ ಮಂಗಳವಾರದಿಂದ ದುರ್ಗಾ ವಿಸರ್ಜನೆಗೆ ಅವಕಾಶ ಆರಂಭವಾಗುತ್ತದೆ’ ಎಂದು ಹೇಳಿದ್ದರು.
ಮಮತಾ ಅವರ ಈ ನಿರ್ಬಂಧವು ಹಿಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿದೆ ಎಂದು ಆರೋಪಿಸಿ ಯೂತ್ ಬಾರ್ ಅಸೋಸಿಯೇಶನ್ ಆಫ್ ಇಂಡಿಯಾ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಕಲ್ಕತ್ತ ಹೈಕೋರ್ಟಿಗೆ ಸಲ್ಲಿಸಿತ್ತು.
ಕಳೆದ ವರ್ಷವೂ ಪಶ್ಚಿಮ ಬಂಗಾಲ ಸರಕಾರ ಇದೇ ರೀತಿಯ ನಿರ್ಬಂಧದ ಆದೇಶ ಹೊರಡಿಸಿತ್ತು ಮತ್ತು ನ್ಯಾಯಾಲಯವು ಅದಕ್ಕೆ ತಡೆಯಾಜ್ಞೆ ನೀಡಿತ್ತು.