Advertisement

ಕಲ್ಕೂರ ಪ್ರತಿಷ್ಠಾನ: ರಾಷ್ಟ್ರ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ

08:45 AM Sep 14, 2017 | |

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು. ಮಧ್ಯಾಹ್ನದಿಂದ ಸಂಜೆಯವರೆಗೆ ಏಕಕಾಲದಲ್ಲಿ ಒಟ್ಟು 28 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

Advertisement

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಸಂಘಟಕ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಕರ್ಣಾಟಕ ಬ್ಯಾಂಕ್‌ನ ಪಿ. ಜಯರಾಮ ಭಟ್‌, ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಮಾಜಿ ಮೇಯರ್‌ ಹರಿನಾಥ್‌, ಎಂ. ಶಶಿಧರ ಹೆಗ್ಡೆ, ಪ್ರಮುಖರಾದ ಹರಿಕೃಷ್ಣ ಪುನರೂರು, ವಿಜಯಲಕ್ಷ್ಮೀ ಶೆಟ್ಟಿ, ದಿನೇಶ್‌ ದೇವಾಡಿಗ, ಲೀಲಾಕ್ಷ ಕರ್ಕೇರ, ಕದ್ರಿ ನವನೀತ್‌ ಶೆಟ್ಟಿ, ಸುಧಾಕರ ರಾವ್‌ ಪೇಜಾವರ ಮುಂತಾದವರು ಉಪಸ್ಥಿತರಿದ್ದರು.

28 ವಿಭಾಗಗಳಲ್ಲಿ ಕೃಷ್ಣ ಕಲರವ
ರಾಷ್ಟ್ರವ್ಯಾಪಿ ಮಾನ್ಯಗೊಂಡ ಶ್ರೀಕೃಷ್ಣವೇಷ ಸ್ಪರ್ಧೆಗಳಲ್ಲಿ ಈ ಬಾರಿ ವಿಶೇಷವಾಗಿ “ಶ್ರೀ ಕೃಷ್ಣ ಗಾನ ವೈಭವ’ ಎಂಬ ವಿಭಾಗ ಸೇರಿದಂತೆ ಒಟು r 28 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಕಂದ ಕೃಷ್ಣ ವಿಭಾಗ, ಮುದ್ದು ಕೃಷ್ಣ , ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ , ಗೀತಾ ಕೃಷ್ಣ,ಯಕ್ಷ ಕೃಷ್ಣ, ರಾಧಾಕೃಷ್ಣ, ಯಶೋದಾ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ದೇವಕಿ ಕೃಷ್ಣ, ವಸುದೇವ ಕೃಷ್ಣ, ನಂದಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ, ಛಾಯಾಕೃಷ್ಣ, ಶ್ರೀಕೃಷ್ಣ ವರ್ಣ ವೈಭವ’ ಚಿತ್ರಕಲಾ ಸ್ಪರ್ಧೆಗಳು ನಡೆದವು.

ವಿಶೇಷ ಬಹುಮಾನಗಳು
ಸಂಘಟಕ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಈ ಸ್ಪರ್ಧೆಯನ್ನು ಕಳೆದ ಮೂರು ದಶಕಗಳಿಂದ ಆಯೋಜಿಸಿಕೊಂಡು ಬರಲಾಗಿದೆ. ಪುಟಾಣಿ ಮನಸ್ಸುಗಳಲ್ಲಿ ಶ್ರೀಕೃಷ್ಣನ ಸ್ವರೂಪ ಕಂಡು ಕೊಳ್ಳುವ, ಆ ಮೂಲಕ ಧಾರ್ಮಿಕ ಜಾಗೃತಿ ಸಮಾಜದಲ್ಲಿ ಮೂಡಿಸುವ ವಿಶೇಷ ಪ್ರಯತ್ನ ನಡೆಸಲಾಗಿದೆ. ಒಟ್ಟು 8 ವೇದಿಕೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಯಿತು. ಜತೆಗೆ ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಉತ್ಸವದಲ್ಲಿ ಜೋಡಿಸಲಾಗಿತ್ತು ಎಂದು ತಿಳಿಸಿದರು.

ಭಾಗವಹಿಸಿದ ಸಾವಿರಾರು ಮಕ್ಕಳಿಗೆ ಉಡುಪಿ ಕಡೆಗೋಲು ಶ್ರೀಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್ಭಗವದ್ಗೀತೆಯ ಪ್ರತಿಯನ್ನು ಆಕರ್ಷಕ ವಸ್ತ್ರದ ಚೀಲದೊಂದಿಗೆ ನೀಡಲಾಯಿತು. ಎಲ್ಲ ವಿಭಾಗದ ವಿಜೇತರಿಗೆ ಉಡುಗೊರೆಯ ಜತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. ಮಕ್ಕಳ ಉತ್ಸವದಲ್ಲಿ ಸ್ಪರ್ಧಿಸಿದ ಮಕ್ಕಳಿಗೆ ಬಿಸಿ ಹಾಲು, ಪೇಡಾ, ಐಸ್‌ಕ್ರೀಂ, ಚಾಕಲೆಟ್‌ ನೀಡಲಾಯಿತು.
ಸ್ಪರ್ಧಿಸಿದ ಅಶಕ್ತ, ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಯಿತು.

Advertisement

ನಂದಗೋಕುಲವಾಯಿತು ಕದ್ರಿ ಪ್ರಾಂಗಣ
ಶ್ರೀ ಕ್ಷೇತ್ರ ಕದ್ರಿಯ ಪ್ರಾಂಗಣ ಬುಧವಾರ ಶ್ರೀಕೃಷ್ಣಮಯವಾಗಿ ಪರಿವರ್ತನೆಗೊಂಡಿತು. ಪುಟ್ಟ ಪುಟ್ಟ ಕಂಗಳ, ಪುಟಾಣಿಗಳ ಕೃಷ್ಣ ವೇಷ ಆಕರ್ಷಣೀಯವಾಗಿತ್ತು. ಒಂದೆರಡು ತಿಂಗಳಿನ ಮಗುವಿನಿಂದ ಆರಂಭವಾಗಿ ಬೇರೆ ಬೇರೆ ವಯಸ್ಸಿನ “ಕೃಷ್ಣಾವತಾರ’ಗಳು ಕಣ್ಮನ ಸೆಳೆದವು. ಕೆಲವರಂತೂ ಮಕ್ಕಳಿಗೆ ಕೃಷ್ಣ ವೇಷವನ್ನು ಬೇರೆಡೆ ಹಾಕಿಕೊಂಡು, ಬೈಕ್‌, ಕಾರಿನಲ್ಲಿ ಬಂದರೆ, ಮಿಕ್ಕುಳಿದವರು ದೇವಸ್ಥಾನದ ಅಭಿಷೇಕ ಮಂದಿರದ ಕೆಳಭಾಗದಲ್ಲಿ ವೇಷ ಹಾಕಿಸಿಕೊಂಡರು. ಕದ್ರಿಯಲ್ಲಿ ಎತ್ತ ನೋಡಿದರತ್ತ ಪುಟಾಣಿ ಕೃಷ್ಣರ ಮುದ್ದುಮುಖಗಳೇ ಗಮನಸೆಳೆಯುತ್ತಿದ್ದವು.

ಛಾಯಾಚಿತ್ರಗ್ರಾಹಕರಿಗೆ ಪುಟಾಣಿ ಮುಖಗಳನ್ನು ಕೆಮರಾದಲ್ಲಿ ಸೆರೆಹಿಡಿಯುವುದೇ ಕೆಲಸವಾಗಿತ್ತು. ಪ್ರಾಂಗಣದ ಬೇರೆ ಬೇರೆ ಮೂಲೆ ಗಳಲ್ಲಿ    ಸ್ಪರ್ಧೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪುಟಾಣಿಗಳನ್ನು ನೋಡಲು ಜನರು ಕುತೂಹಲಭರಿತರಾಗಿ ಅತ್ತಿಂದಿತ್ತ ಓಡಾಡಿದರು. ಮುದ್ದುಕಂದಮ್ಮಗಳ ಜತೆಗೆ ಯಶೋದೆಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನೊಂದೆಡೆ ಯಶೋದೆಯರು ಮುದ್ದು ಮಕ್ಕಳಿಗೆ ಬೇರೆ ಬೇರೆ ರೀತಿಯ ಅಭಿನಯ ಕಲೆಗಳನ್ನು ಹೇಳಿಕೊಡುತ್ತಿದ್ದ ಶೈಲಿಯೂ ಗಮನೀಯವಾಗಿತ್ತು. ಮುದ್ದುಕೃಷ್ಣರ ಜತೆಗೆ ಸೆಲ್ಫಿ ತೆಗೆದು ಮನೆ ಮಂದಿ ತಮ್ಮ ಇಷ್ಟದವರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next