Advertisement

ಬೀದಿನಾಯಿಗಳ ಲೆಕ್ಕಾಚಾರಕ್ಕಿಳಿದ ಪಾಲಿಕೆ

11:44 AM Jul 11, 2023 | Team Udayavani |

ಬೆಂಗಳೂರು: ಬಿಬಿಎಂಪಿ ಇದೀಗ ಬೀದಿ ನಾಯಿಗಳ ಲೆಕ್ಕಾಚಾರಕ್ಕೆ ಸಜ್ಜಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಬೀದಿ ನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭವಾಗಲಿದ್ದು, ಪ್ರತಿ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಯಲಿದೆ.

Advertisement

14 ದಿನಗಳ ಸಮೀಕ್ಷೆಯ ನಂತರ ವಿಜ್ಞಾನಿ ಡಾ.ಕೆ.ಪಿ. ಸುರೇಶ್‌ ನೇತೃತ್ವದ ತಂಡ ಪಾಲಿಕೆಗೆ ಬೀದಿನಾಯಿಗಳ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಲಿದೆ. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ಪ್ರಾಣಿಜನ್ಯ ರೋಗವಾದ ರೇಬೀಸ್‌ ರೋಗ ತಡೆಗೆ ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್‌ ಲಸಿಕಾ ಕಾರ್ಯಕ್ರವನ್ನು ಪಾಲಿಕೆಯ ಪಶುಪಾಲನಾ ವಿಭಾಗ ಕೈಗೊಂಡಿದೆ. 100ಕ್ಕೂ ಅಧಿಕ ಮಂದಿ ಬೀದಿ ಬದಿ ಶ್ವಾನಗಳ ಸಮೀಕ್ಷೆಯಲ್ಲಿ ತೊಡಗಲಿದ್ದಾರೆ. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ವ್ಯವಸ್ಥಿತವಾಗಿ ಬೀದಿ ಬದಿ ನಾಯಿಗಳ ಸಮೀಕ್ಷೆ ನಡೆಸುವ ಹಿನ್ನೆಲೆಯಲ್ಲಿ 50 ತಂಡಗಳನ್ನು ಪಾಲಿಕೆ ರಚನೆ ಮಾಡಿದೆ.

ಈ ಹಿಂದೆ 2019ರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಮಾಡಿದ್ದು, 3.10 ಲಕ್ಷ ಬೀದಿ ನಾಯಿಗಳು ಇರುವುದು ತಿಳಿದು ಬಂದಿತ್ತು. ಪಾಲಿಕೆಯ ಎಂಟೂ ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್‌ ಲಸಿಕಾ ಕಾರ್ಯಕ್ರಮವನ್ನು 2019ನೇ ಸಾಲಿನಿಂದ ಈವರೆಗೂ ನಿರಂತರವಾಗಿ ನಡೆಯುತ್ತಿದೆ. ಡಾ.ಪಿ.ಸುರೇಶ್‌, ಡಾ.ಹೇಮಾದ್ರಿ ದಿವಾಕರ್‌, ಡಾ.ಶ್ರೀಕೃಷ್ಣ ಇಸ್ರೂರು, ಡಾ.ಬಾಲಾಜಿ ಚಂದ್ರಶೇಖರ್‌ ಒಳಗೊಂಡ ಪ್ರಧಾನ ವಿಜ್ಞಾನಿಗಳ ತಂಡದ ಜತೆಗೆ ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿಯ ಕೂಡ ಬೀದಿ ನಾಯಿಗಳ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ. ಪಶು ವೈದ್ಯಕೀಯ ವಿಭಾಗದ ಸಿಬ್ಬಂದಿಗಳು ಕೂಡ ಕೈ ಜೋಡಿಸಲಿದ್ದಾರೆ.

50 ತಂಡ ರಚನೆ: 840 ಚ.ಕಿ.ಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯನ್ನು (ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳು) 0.5 ಚ.ಕಿ.ಮೀ ವ್ಯಾಪ್ತಿಯ 6,850 ಮೈಕ್ರೋ ಜೋನ್‌ ಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲಿ ಶೇ. 20ರಷ್ಟು ರ್‍ಯಾಂಡಮ್‌ ಸ್ಯಾಂಪಲ್‌ಗ‌ಳು ಅಂದರೆ 1,360 ಮೈಕ್ರೋ ಜೋನ್‌ ಗಳಲ್ಲಿ ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗುವುದು. ಬೆಂಗಳೂರು ನಗರ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ 70 ಅರೆತಾಂತ್ರಿಕ ಸಿಬ್ಬಂದಿ ಹಾಗೂ ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಸೇರಿದಂತೆ 100 ಮಂದಿಯ ಮೂಲಕ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ವಾರ್ಡ್‌ ವಾರು ನಿರ್ವಹಿಸಲು 1 ತಂಡದಲ್ಲಿ ಇಬ್ಬರು ಸಮೀಕ್ಷಾದಾರರಂತೆ ಒಟ್ಟು 50 ತಂಡಗಳನ್ನು ರಚಿಸಲಾಗಿದ್ದು, ಇದರ ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಬೀದಿ ನಾಯಿಗಳ ಸರ್ವೇ ಹೇಗೆ ನಡೆಯಲಿದೆ?: ಬೀದಿ ನಾಯಿಗಳ ಸಮೀಕ್ಷೆ ಒಟ್ಟು 14 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ನಡೆಯಲಿದೆ. ಮೈಕ್ರೋಜೋನ್‌ನಲ್ಲಿ ಕಂಡು ಬರುವ ಬೀದಿ ನಾಯಿಗಳ ಭಾವಚಿತ್ರದೊಂದಿಗೆ ಪ್ರತಿ ನಾಯಿಯ ಮಾಹಿತಿಯನ್ನು ಡಬ್ಲೂéವಿಎಸ್‌ ಡೇಟಾ ಕಲೆಕ್ಷನ್‌ ಆ್ಯಪ್‌ನಲ್ಲಿ ನಮೂದಿಸಲಾಗುವುದು. ಆ್ಯಪ್‌ನಲ್ಲಿ ದಾಖಲಾದ ಮಾಹಿತಿಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುವುದಿಲ್ಲ. ಒಟ್ಟು 14 ದಿನಗಳ ಸಮೀಕ್ಷೆಯ ನಂತರ ವಿಜ್ಞಾನಿ ಡಾ.ಕೆ.ಪಿ.ಸುರೇಶ್‌, ಮಾಹಿತಿಯನ್ನು ಕ್ರೋಢೀಕರಿಸಿ ಪಾಲಿಕೆಗೆ ವರದಿ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next