Advertisement

ಗೃಹ ಸಾಲದಲ್ಲಿ ಕರ ವಿನಾಯಿತಿಯ ಲೆಕ್ಕಾಚಾರ

12:34 AM Aug 12, 2019 | Sriram |

ಈ ಲೇಖನ ಪ್ರಸ್ತುತ ರಿಟರ್ನ್ ಫೈಲಿಂಗ್‌ ಮಾಡುವ 2018-19ರ ವಿತ್ತ ವರ್ಷಕ್ಕೆ (2018-19) ಅನ್ವಯವಾಗುತ್ತದೆ (ಅಸೆಸ್ಮೆಂಟ್ ವರ್ಷ 2019-20). ಮುಂದಿನ ವರ್ಷಕ್ಕೆ ಅನ್ವಯವಾಗುವಂತಹ ಬಜೆಟ್ 2019ರ ಅಂಶಗಳು ಇದರಲ್ಲಿ ಬಂದಿಲ್ಲ.

Advertisement

ಈಗ, ಮುಖ್ಯ ವಿಚಾರಕ್ಕೆ ಬರೋಣ:

ಗೃಹಸಾಲದ ಮೇಲೆ ಎರಡು ರೀತಿಯಲ್ಲಿ ಕರವಿನಾಯಿತಿ ಸಿಗುತ್ತದೆ – ಸಾಲದ ಮರುಪಾವತಿಯ ಬಡ್ಡಿಯ ಅಂಶದ ಮೇಲೆ (ಸೆಕ್ಷನ್‌ 24) ಹಾಗೂ ಮರುಪಾವತಿಯ ಅಸಲಿನ ಅಂಶದ ಮೇಲೆ (ಸೆಕ್ಷನ್‌ 80ಸಿ). ಬ್ಯಾಂಕುಗಳಿಗೆ ನೀವು ನೀಡುವ ತಿಂಗಳ ಇ.ಎಂ.ಐ ನಲ್ಲಿ ಇವೆರಡೂ ಭಾಗಗಳೂ ಸೇರಿದ್ದು ಅವುಗಳ ಪ್ರತ್ಯೇಕ ಮೊತ್ತ ಬ್ಯಾಂಕ್‌ ನೀಡುವ ಹೋಮ್‌ ಲೋನ್‌ ಇಂಟರೆಸ್ಟ್‌ ಸರ್ಟಿಫಿಕೆಟ್‌ನಲ್ಲಿ ನಮೂದಿತವಾಗಿರುತ್ತದೆ. ಅವೆರಡನ್ನೂ ಪ್ರತ್ಯೇಕವಾಗಿ ನೋಡಿ ಆದಾಯ ತೆರಿಗೆಯ ವಿನಾಯಿತಿ ಪದಕೊಳ್ಳಬೇಕು.

ಇಲ್ಲಿ ಇನ್ನೊಂದು ಗಮನಾರ್ಹ ವಿಚಾರವೆಂದರೆ ಕರ ವಿನಾಯಿತಿಯು ಬ್ಯಾಂಕಿನಿಂದ ಪಡೆದ ಗೃಹಸಾಲಕ್ಕೆ ಮಾತ್ರವೇ ಅಲ್ಲದೆ ನಿಮ್ಮ ಸಂಬಂಧಿಕರು, ಉದ್ಯೋಗದಾತ ಅಥವಾ ಯಾವುದೇ ಮಿತ್ರರಿಂದ ಪಡೆದ ಖಾಸಗಿ ಸಾಲಕ್ಕೂ ಅನ್ವಯವಾಗುತ್ತದೆ. (ವಿದ್ಯಾ ಸಾಲದಲ್ಲಿ ಮಾತ್ರ ಖಾಸಗಿ ಮೂಲಕ್ಕೆ ಮಾನ್ಯತೆ ಇಲ್ಲ) ಅಂತಹ ಖಾಸಗಿ ಸಾಲದ ಸಂದರ್ಭದಲ್ಲೂ ಅಸಲು ಮತ್ತು ಬಡ್ಡಿಯನ್ನು ನೈಜ ರೀತಿಯಲ್ಲಿ ಪ್ರತ್ಯೇಕ ಮಾಡಿ ಲೆಕ್ಕ ಹಾಕಬೇಕು.

ಈಗ ಬಡ್ಡಿ ಮತ್ತು ಅಸಲು – ಅವೆರಡರ ಕರ ವಿನಾಯಿತಿಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ನೋಡೋಣ:

Advertisement

1. ಬಡ್ಡಿಯ ಮೇಲೆ ಕರವಿನಾಯಿತಿ
ಇದರಲ್ಲೂ ಎರಡು ಭಾಗಗಳಿವೆ. ಸ್ವಂತ ವಾಸದ ಮನೆಯ ಮೇಲೆ ಕಟ್ಟಿದ ಬಡ್ಡಿ ಹಾಗೂ ಬಾಡಿಗೆ ನೀಡಿದ ಮನೆಯ ಮೇಲೆ ಕಟ್ಟಿದ ಬಡ್ಡಿ ಪೈಕಿ ಒಬ್ಟಾತನಿಗೆ ಕರವಿನಾಯಿತಿ ಲಭ್ಯ.

ಅ. ಸ್ವಂತ ವಾಸಕ್ಕೆ ಗೃಹಸಾಲ
ಆದಾಯ ತೆರಿಗೆಯ ಕಾನೂನಿನನ್ವಯ ಸ್ವಂತ ವಾಸದ ಒಂದು ಮನೆಯ ಖರೀದಿ, ನಿರ್ಮಾಣ, ರಿಪೇರಿ, ನವೀಕರಣ ಅಥವಾ ಪುನರ್ನಿರ್ಮಾಣಕ್ಕಾಗಿ ಗೃಹ ಸಾಲ ಪಡೆದುಕೊಂಡಿದ್ದಲ್ಲಿ ಅದರ ಮೇಲಿನ ಬಡ್ಡಿಯ ಮೇಲೆ ಕರ ವಿನಾಯತಿ ಪಡಕೊಳ್ಳಬಹುದು. ಈ ವಿನಾಯತಿ ಎಪ್ರಿಲ್ 1, 1999ರ ಮೊದಲು ಮಾಡಿಕೊಂಡ ಮನೆಗಳಿಗೆ ರೂ.30,000 ಇದ್ದಿತ್ತು. ಆ ಬಳಿಕ ಖರೀದಿ ಅಥವಾ ನಿರ್ಮಾಣ ಮಾಡಿಕೊಂಡ ಮನೆಗಳ ಮೇಲೆ ಈ ಮಿತಿಯನ್ನು ರೂ.1,50,000 ಕ್ಕೆ ಏರಿಸಿದ್ದು ವಿತ್ತ ವರ್ಷ 2015-16 ರಿಂದ ಅದನ್ನು ರೂ.2,00,000ಕ್ಕೆ ಏರಿಸಲಾಗಿದೆ. ಆದರೆ ರಿಪೇರಿ ಮತ್ತು ನವೀಕರಣಕ್ಕೆ ಈ ಮಿತಿ ಈಗಲೂ ರೂ. 30,000 ಮಾತ್ರವೇ ಇದೆ. ಬ್ಯಾಂಕಿನವರ ಸ್ಟೇಟ್ಮೆಂಟಿನಲ್ಲಿ ಹೊಸ ಸಾಲ ಅಥವಾ ನವೀಕರಣ ಇತ್ಯಾದಿ ಸಾಲದ ಕಾರಣ ಸ್ಪಷ್ಟವಾಗಿ ನಮೂದಿತವಾಗಿರುತ್ತದೆ. ಅದರಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಬೇಕು. (ನೆನಪಿಡಿ, ಇರುವ ಮನೆಗೆ ಹೊಸದಾಗಿ ಇನ್ನೊಂದು ಮಹಡಿಯನ್ನು ಕಟ್ಟುವುದು ನವೀಕರಣ ಅಲ್ಲ; ಅದು ಹೊಸ ಸಾಲದ ಅಡಿಯಲ್ಲಿಯೇ ಬರುತ್ತದೆ).


ಅಂದರೆ ಸ್ವಂತವಾಸದ ಮನೆಗೆ ಬಾಡಿಗೆ ಆದಾಯ ಶೂನ್ಯವಾಗಿದ್ದು, ಗೃಹಸಾಲದ ಮೇಲೆ ಕೊಟ್ಟ ಬಡ್ಡಿಯನ್ನು ರೂ. 2,00,000ದ ಮಿತಿಯೊಳಗೆ ಒಂದು ವೆಚ್ಚವಾಗಿ ತೋರಿಸಬಹುದು. ಇದು ಸ್ವಂತ ವಾಸದ ಮನೆಗೆ ಮಾತ್ರ ಅನ್ವಯ ಹಾಗೂ ಇಲ್ಲಿ ಗೃಹಸಾಲ ಪಡೆದು 5 ವರ್ಷಗಳೊಳಗಾಗಿ ಗೃಹ ನಿರ್ಮಾಣ ಪೂರ್ಣಗೊಂಡು ವಾಸ್ತವ್ಯ ಹೂಡಿರಬೇಕು. ಆದರೆ ಉದ್ಯೋಗ/ಬಿಸಿನೆಸ್‌ ನಿಮಿತ್ತ ಪರವೂರಿನಲ್ಲಿ ಇರಬೇಕಾದ ಸಂದರ್ಭದಲ್ಲಿ ವಾಸವಿಲ್ಲದಿದ್ದರೂ ಸ್ವಂತ ವಾಸವೆಂದು ಪರಿಗಣಿಸಬಹುದು. ಈ ಬಡ್ಡಿ ವೆಚ್ಚವು ನಿಮ್ಮ ಸಂಬಳ, ಬಿಸಿನೆಸ್‌, ಮತ್ತಿತರ ಇತರ ಒಟ್ಟಾರೆ ಆದಾಯಗಳಿಂದ ಕಳೆಯಲ್ಪಟ್ಟು ನಿಮ್ಮ ಆದಾಯದ ಸ್ಲಾಬ್‌ ಪ್ರಕಾರ ಒಟ್ಟು ಆದಾಯದ ಮೇಲೆ ಕರ ವಿನಾಯಿತಿಗೆ ಎಡೆಮಾಡಿ ಕೊಡುತ್ತದೆ.

ಹೆಚ್ಚುವರಿ ಲಾಭ (ಸೆಕ್ಷನ್‌ 80ಇಇ)
2016ರ ಬಜೆಟ್ಟಿನಲ್ಲಿ ವಿತ್ತ ವರ್ಷ 2016-17ದಲ್ಲಿ ಪಡೆದ ಗೃಹಸಾಲಕ್ಕೆ ಮಾತ್ರವೇ ಅನ್ವಯವಾಗುವಂತೆ ಮೇಲೆ ಸಿಗುವ ವಿನಾಯಿತಿಯ ಮಿತಿಯನ್ನು ರೂ.2 ಲಕ್ಷದಿಂದ ರೂ.2.5 ಲಕ್ಷಕ್ಕೆ ಏರಿಸಲಾಗಿತ್ತು. ಆದರೆ ಇದು ಎಲ್ಲಾ ಗೃಹ ಸಾಲಗಳಿಗೂ ಅನ್ವಯಿಸುವುದಿಲ್ಲ. ಷರತ್ತುಗಳು: 1. ಇದು ನಿಮ್ಮ ಮೊತ್ತಮೊದಲ ಮನೆಯಾಗಿರಬೇಕು 2. ಮನೆಯ ಒಟ್ಟು ಬೆಲೆ ರೂ.50 ಲಕ್ಷದ ಒಳಗಿರಬೇಕು 3. ಗೃಹ ಸಾಲದ ಮೊತ್ತ ರೂ.35 ಲಕ್ಷದ ಒಳಗಿರಬೇಕು. 4. ಮನೆ ಪೂರ್ತಿ ನಿರ್ಮಾಣವಾಗಿ ನಿಮ್ಮ ಕೈಗೆ (ಪೊಸೆಷನ್‌) ಬಂದಿರಬೇಕು. 5. ಗೃಹಸಾಲ ಒಂದು ವಿತ್ತೀಯ ಸಂಸ್ಥೆಯಿಂದ ಮಾತ್ರವೇ ತೆಗೆದುಕೊಂಡದ್ದಾಗಿರಬೇಕು. 6. ಸಾಲವನ್ನು 2016-17 ವಿತ್ತೀಯ ವರ್ಷದಲ್ಲಿ ಪಡೆದಿರಬೇಕು. ಈ ಸೆಕ್ಷನ್‌ ಸೌಲಭ್ಯ ಈ ವಿತ್ತ ವರ್ಷದಲ್ಲಿ (2018-19) ಪಡೆದ ಸಾಲಕ್ಕೆ ಅನ್ವಯ ಆಗುವುದಿಲ್ಲವಾದರೂ ಆ ವರ್ಷದಲ್ಲಿ ಸಾಲ ಪಡೆದವರಿಗೆ ಈಗಲೂ ತಮ್ಮ ಸಾಲ ಪೂರ್ತಿ ತೀರುವವರೆಗೂ ನಿರಂತರ ಲಾಭ ಲಭ್ಯ.

(ಸರಕಾರದ ಆ ವಿಶೇಷ ಯೋಜನೆಯ ಪ್ರಕಾರ 2013-14ರ ಅವಧಿಯಲ್ಲಿ ಪ್ರಥಮ ಬಾರಿಗೆ ಮನೆ ಖರೀದಿ/ನಿರ್ಮಾಣ ಮಾಡಿಕೊಂಡವರಿಗೆ ರೂ. 1ಲಕ್ಷದ ಹೆಚ್ಚುವರಿ ಕರ ವಿನಾಯತಿಯನ್ನು (ಆವಾಗ ಇದ್ದ 80ಸಿ ಸೆಕ್ಷನ್ನಿನ ರೂ.1.5 ಲಕ್ಷ ಮೀರಿ) ಬಡ್ಡಿ ಪಾವತಿಯ ಮೇಲೆ ನೀಡಲಾಗಿತ್ತು. ಆದರೆ ಈ ಸಾಲವು ರೂ. 25 ಲಕ್ಷ ದಾಟದೆ ಮನೆಯ ಒಟ್ಟು ವೆಚ್ಚವೂ ರೂ. 40 ಲಕ್ಷ ದಾಟದೆ ಇರಬೇಕಾಗಿತ್ತು. ಈ ಯೋಜನೆ 13-14 ರಲ್ಲಿ ಜಾರಿಯಲ್ಲಿತ್ತು. ಆ ವರ್ಷ ರೂ. 1 ಲಕ್ಷದ ಮಿತಿ ಮುಗಿಯದೇ ಇದ್ದವರಿಗೆ ಉಳಿಕೆ ಮಿತಿಯನ್ನು ಮತ್ತಿನ 2014-15 ರಲ್ಲಿ ಪೂರೈಸುವ ಅವಕಾಶವನ್ನೂ ನೀಡಲಾಗಿತ್ತು. ಅಂದರೆ 2013-14 ರಲ್ಲಿ ರೂ. 70,000 ಮಾತ್ರವೇ ಉಪಯೋಗಿಸಿಕೊಂಡಿದ್ದರೆ ಉಳಿದ ರೂ. 30,000ವನ್ನು 2014-15 ರಲ್ಲಿ ಪಡಕೊಳ್ಳಬಹುದಿತ್ತು. ಈ ಸ್ಕೀಮು ಈಗ ಲಭ್ಯವಿಲ್ಲ. (ಈ ವಿವರಗಳು ಮಾಹಿತಿಗೆ ಮಾತ್ರ)

ಆ. ಬಾಡಿಗೆ ಮನೆಯ ಗೃಹ ಸಾಲ
ಒಂದಕ್ಕಿಂತ ಜಾಸ್ತಿ ಮನೆ ಇರುವವರು ಅದರಲ್ಲಿ ಯಾವುದಾದರೂ ಒಂದನ್ನು (ನಿಮ್ಮ ಆಯ್ಕೆಯಂತೆ) ಮಾತ್ರ ಶೂನ್ಯ ಆದಾಯದ ಸ್ವಂತ ವಾಸದ್ದೆಂದು ಗುರುತಿಸಬಹುದಾಗಿದೆ. ಉಳಿದ ಒಂದು ಅಥವಾ ಜಾಸ್ತಿ ಮನೆಗಳೆಲ್ಲವೂ ಬಾಡಿಗೆಯದ್ದೆಂದು ಗುರುತಿಸಿ ಅವುಗಳಿಂದ ಬಾಡಿಗೆ ಬಂದರೂ ಬಾರದಿದ್ದರೂ ಬಂದಿದೆಯೆಂದೇ ಪರಿಗಣಿಸಿ (ಖಾಲಿ ಬಿದ್ದಿದ್ದರೂ ಸಹ) ಅದರ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು.

ಒಂದು ವೇಳೆ ನೀವು ಇನ್ನೊಂದು ಮಗದೊಂದು ಮನೆಗಾಗಿ ಎರಡನೆಯ, ಮೂರನೆಯ ಇತ್ಯಾದಿ ಗೃಹಸಾಲ ಪಡೆದಿದ್ದಲ್ಲಿ ಅದನ್ನು ಬಾಡಿಗೆಗೆ ನೀಡಿದ್ದಲ್ಲಿ ಯಾ ಕಾನೂನು ಪ್ರಕಾರ ನೀಡಿದೆಯೆಂದು ಪರಿಗಣಿಸಿದ್ದಲ್ಲಿ ಅಂತಹ ಸಾಲಗಳ ಬಡ್ಡಿಗಳ ಮೇಲೂ ಒಟ್ಟಾರೆ ಇನ್ನೊಂದು ರೂ. 2,00,000ದ ಕರ ಲಾಭ ಪಡೆಯಬಹುದು. ಈ ಲಾಭಕ್ಕೆ ಮೊದಲು ಮಿತಿ ಇರಲಿಲ್ಲವಾದರೂ ವಿತ್ತ ವರ್ಷ 2017-18ರಿಂದ ಇದಕ್ಕೂ ರೂ. 2 ಲಕ್ಷದ ಮಿತಿ ಹೇರಲಾಗಿದೆ. ಬಾಡಿಗೆಯ ಕೆಟಗರಿಯಲ್ಲಿ ಎಷ್ಟು ಮನೆಗಳಿದ್ದರೂ ಒಟ್ಟಾರೆ ಮಿತಿ ರೂ. 2,00,000; ಇದು ಮನೆಯೊಂದರ ಮಿತಿ ಅಲ್ಲ.

ಅಂತಹ ಸಂದರ್ಭದಲ್ಲಿ ಮನೆಯ/ಮನೆಗಳ ವಾರ್ಷಿಕ ಮೌಲ್ಯವನ್ನು ಆದಾಯವಾಗಿ ತೋರಿಸಿ ಅದರಿಂದ ಮುನಿಸಿಪಲ್ ಟ್ಯಾಕ್ಸ್‌ ಕಳೆದು ಆ ಬಳಿಕ ಅದರ ಶೇ.30 ಅನ್ನು ರಿಪೇರಿ ಇತ್ಯಾದಿ ಬಾಬ್ತು ಸ್ಟಾಂಡರ್ಡ್‌ ಖರ್ಚು (ನಿಜವಾದ ಖರ್ಚು ಎಷ್ಟೇ ಇದ್ದರೂ ಈ ಶೇ. 30 ಲಭ್ಯ) ಎಂದು ಕಳೆದು ಉಳಿದ ಮೊತ್ತವನ್ನು ನಿವ್ವಳ ಆದಾಯವಾಗಿ ತೋರಿಸತಕ್ಕದ್ದು. ವಾರ್ಷಿಕ ಮೌಲ್ಯ ಎಂದರೆ ಮುನಿಸಿಪಾಲಿಟಿ ಲೆಕ್ಕದ ಮೌಲ್ಯ ಮತ್ತು ಆ ಪರಿಸರದ ನ್ಯಾಯಯುತ ಬಾಡಿಗೆ ಮತ್ತು ನಿಜವಾಗಿ ಪಡೆದ ಬಾಡಿಗೆ – ಇವುಗಳಲ್ಲಿ ಯಾವುದು ಹೆಚ್ಚೋ ಅದು.

ಪ್ರಿ-ಇಎಮ್ಐ
ಇವಿಷ್ಟು ವಾರ್ಷಿಕ ಬಡ್ಡಿಯ ಮಾತಾಯಿತು. ಬಡ್ಡಿ ಪಾವತಿಯ ಮೇಲಿನ ಈ ಕರ ಸೌಲಭ್ಯ ಮನೆ ಸಂಪೂರ್ಣವಾಗಿ ವಾಸ್ತವ್ಯ ಪತ್ರ ಪಡೆದು ಬ್ಯಾಂಕಿನಲ್ಲಿ ಇಎಮ್ಐ ಆರಂಭವಾದ ಬಳಿಕವೇ ದೊರೆಯುತ್ತದೆ. ಆದರೆ ಮನೆ ಕಟ್ಟುತ್ತಿರುವಾಗಲೂ ಬ್ಯಾಂಕು ತಾನು ನೀಡಿದ ಸಾಲದ ಮೇಲೆ ಬಡ್ಡಿ ಹೇರುತ್ತದಲ್ಲವೇ? ಆಗ ಇಎಮ್ಐ ಇರುವುದಿಲ್ಲ. ತಾತ್ಕಾಲಿಕ ಮಾಸಿಕ ಬಡ್ಡಿ ಪಾವತಿಸಬೇಕಾಗಿ ಬರುತ್ತದೆ. ಇಂತಹ ಇಎಮ್ಐ ಪೂರ್ವ ಬಡ್ಡಿ (ಪ್ರಿ-ಇಎಮ್ಐ)ಯ ಮೇಲೆಯೂ ಕರವಿನಾಯತಿ ಇದೆ. ಅಂತಹ ಪ್ರಿ-ಇಎಮ್ಐ ಮೊತ್ತವನ್ನು ಗೃಹ ನಿರ್ಮಾಣವಾಗಿ ಬಡ್ಡಿಕಟ್ಟಲು ಆರಂಭಿಸಿದ ಮೇಲೆ 5 ಸಮಾನ ವಾರ್ಷಿಕ ಕಂತುಗಳಾಗಿ (ಒಟ್ಟು ಬಾಕಿಯ ಶೇ. 20 ಪ್ರತಿವರ್ಷ) ಕರ ವಿನಾಯತಿಯ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಆದರೆ, ಇದು ಮೇಲೆ ಹೇಳಿದ ರೂ. 2,00,000ದ ಮಿತಿಯೊಳಗೇ ಬರುತ್ತದೆ. ಅಷ್ಟರಮಟ್ಟಿಗೆ ಇಎಮ್ಐ ಬಡ್ಡಿ ಇಲ್ಲದವರಿಗೆ ಮಾತ್ರ ಇದು 5 ವರ್ಷಗಳ ಮಟ್ಟಿಗೆ ಅನುಕೂಲವಾದೀತು.

2. ಅಸಲು
ಬಡ್ದಿಯ ಮೇಲಲ್ಲದೆ ಸಾಲಪಾವತಿಯ ಅಸಲು (ಪ್ರಿನ್ಸಿಪಲ್) ಭಾಗದ ಮೇಲೂ ಸೆಕ್ಷನ್‌ 80ಸಿ ಅನ್ವಯ ರೂ. 1.5 ಲಕ್ಷದವರೆಗೆ ವಿನಾಯತಿ ಇದೆ. ಇಎಮ್ಐ ಯಾವತ್ತೂ ಸಮಾನವಾಗಿದ್ದರೂ ಅದರೊಳಗಿನ ಅಸಲು ಮತ್ತು ಬಡ್ಡಿಯ ಭಾಗಗಳು ಒಂದೇ ಸಮ ಇರುವುದಿಲ್ಲ. ಮೊದಮೊದಲು ಬಡ್ಡಿಯ ಭಾಗ ಜಾಸ್ತಿಯಿದ್ದು ಕಾಲಕ್ರಮೇಣ ಅಸಲಿನ ಭಾಗ ಜಾಸ್ತಿಯಾಗುತ್ತದೆ. ಬ್ಯಾಂಕಿನವರು ಈ ನಿಟ್ಟಿನಲ್ಲಿ ಅಸಲು ಮತ್ತು ಬಡ್ಡಿಯ ಪ್ರತ್ಯೇಕವಾಗಿ ನಮೂದಿಸಿ ವರ್ಷಾಂತ್ಯದಲ್ಲಿ ಆ ಬಗ್ಗೆ ಸ್ಪಷ್ಟವಾದ ಸರ್ಟಿಫಿಕೇಟ್ ನೀಡುತ್ತಾರೆ. ಈ ಸೆಕ್ಷನ್‌ 80ಸಿ ವಿನಾಯತಿಯಲ್ಲಿ ಇನ್ಶೂರೆನ್ಸ್‌, ಪಿಪಿಎಫ್, ಎನ್‌ಎಸ್‌ಸಿ, 5 ವರ್ಷದ ಎಫ್ಡಿ , ಇಎಲ್ಎಸ್‌ಎಸ್‌ ಜಾತಿಯ ಮ್ಯೂಚುವಲ್ ಫ‌ಂಡ್‌, 2 ಮಕ್ಕಳ ಶಾಲಾ ಟ್ಯೂಶನ್‌ ಇತ್ಯಾದಿಗಳ ಪಟ್ಟಿಯಲ್ಲಿ ಗೃಹಸಾಲದ ಅಸಲು ಭಾಗ ಕೂಡಾ ಸೇರಿದೆ. (ಅಲ್ಲದೆ, ಹೊಸ ಮನೆ ಖರೀದಿಯ ಸಂದರ್ಭದಲ್ಲಿ ಪಾವತಿಸಿದ ಸ್ಟಾಂಪ್‌ಡ್ಯೂಟಿ ಮತ್ತು ರಿಜಿಸ್ಟ್ರೇಶನ್‌ ವೆಚ್ಚಗಳೂ ಕೂಡಾ 80ಸಿ ಅಡಿಯಲ್ಲಿ ವಿನಾಯಿತಿಗೆ ಅರ್ಹವಾಗಿರುತ್ತದೆ ಎಂಬುದು ಈ ಸಂದರ್ಭದಲ್ಲಿ ಗಮನಾರ್ಹ).

ಕೆಲವೊಮ್ಮೆ ಕೈಯಲ್ಲಿ ಹಣವಿದ್ದಂತೆ ಸಾಲದ ಅಸಲು ಭಾಗವನ್ನು ಭಾಗಶಃ ಮರುಪಾವತಿ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿಯೂ ಅಸಲಿನ ಮರುಪಾವತಿಯನ್ನು ಈ 80ಸಿ ಸೆಕ್ಷನ್‌ ಅಡಿಯಲ್ಲಿ ಕರಲಾಭಕ್ಕಾಗಿ ಬಳಸಿಕೊಳ್ಳಬಹುದಾಗಿದೆ.

ಆದರೆ ಅಸಲು ಪಾವತಿಯ ಮೇಲಿನ ಕರ ಲಾಭ ಸ್ವಂತ ವಾಸದ ಮನೆಗಳಿಗೆ ಮಾತ್ರ ಅನ್ವಯಿಸುತ್ತದೆ. ಬಾಡಿಗೆ ನೀಡಿದ ಅಥವಾ ನೀಡಿದೆ ಎಂದು ಪರಿಗಣಿಸಲ್ಪಡುವ ಮನೆಗಳಿಗೆ ಈ ಕರ ಲಾಭ ಇರುವುದಿಲ್ಲ.

ಅಸಲಿನ ಪಾವತಿಯ ಜೊತೆಗೆ ನಾವು ಬೇರೆ ಇನ್ನೂ ಮೂರು ಪ್ರಾಮುಖ್ಯ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು.

ಮೊದಲನೆಯದಾಗಿ, ಅಸಲಿನ ಪಾವತಿಯ ಮೇಲಿನ ಕರ ವಿನಾಯತಿ ಮನೆ ಸಂಪೂರ್ಣವಾದ ಬಳಿಕವೇ ಲಭ್ಯವಾಗುತ್ತದೆ. ಮನೆ ನಿರ್ಮಾಣವಾಗುತ್ತಿರುವ ಹಂತದಲ್ಲಿ ಅಸಲನ್ನು ಮರುಪಾವತಿ ಮಾಡಿದರೆ ಅದು ಕರ ವಿನಾಯತಿಗೆ ಭಾಜನವಾಗುವುದಿಲ್ಲ.

ಎರಡನೆಯದಾಗಿ, ಮನೆ ನಿರ್ಮಾಣವಾಗಿ 5 ವರ್ಷದೊಳಗೆ ಮನೆಯನ್ನು ಮಾರಬಾರದು. ಹಾಗೆ ಮಾರಿದರೆ ಆವರೆಗೆ ಪಡಕೊಂಡ ಅಸಲಿನ ಮರುಪಾವತಿಯ ಮೊತ್ತವನ್ನು ಮನೆಮಾರಿದ ವರ್ಷದ ಆದಾಯವೆಂದು ಸೇರಿಸಲ್ಪಟ್ಟು ತೆರಿಗೆ ಪಾವತಿ ಮಾಡತಕ್ಕದ್ದು.

ಮೂರನೆಯದಾಗಿ, ಅಸಲು ಭಾಗದ ಮೇಲಿನ ಈ 80ಸಿ ರಿಯಾಯಿತಿ ಬ್ಯಾಂಕ್‌ ಸಾಲಕ್ಕೆ ಮಾತ್ರ ಲಭ್ಯ. ಖಾಸಗಿ ಸಾಲಗಳಿಗಿಲ್ಲ.

ಜಂಟಿ ಸಾಲ
ಜಂಟಿ ಸಾಲಗಳನ್ನು ಪತಿ-ಪತ್ನಿ, ಅಣ್ಣ ತಮ್ಮಂದಿರು ಅಥವಾ ಬೇರೆ ಕೆಲ ಜನರು ಒಟ್ಟುಗೂಡಿ ಕೂಡಾ ಪಡೆಯಬಹುದು ಮತ್ತು ಅಂತಹ ಜಂಟಿ ಸಾಲಗಳ ಮೇಲೆ ಕರ ಲಾಭವು ಸಾಲಕ್ಕೆ ಒಳಗೊಂಡ ಎಲ್ಲರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ವೈಯಕ್ತಿಕ ಮಿತಿಯೊಳಗೆ ಸಿಗುತ್ತದೆ. ಹೆಚ್ಚುವರಿ ಸೆಕ್ಷನ್‌ 80ಇಇ ಅಲ್ಲದೆ ಅಸಲಿನ ಭಾಗದ ಮೇಲೂ ಕರ ವಿನಾಯಿತಿ ಪ್ರತ್ಯೇಕ ಪ್ರತ್ಯೇಕವಾಗಿ ಇಬ್ಬರಿಗೂ ಒಂದೇ ಜಂಟಿ ಸಾಲದ ಮೇಲೆ ಲಭ್ಯ. ಆದರೆ ಈ ರೀತಿ ಜಂಟಿ ಸಾಲದ ಕರಲಾಭ ಪಡೆಯಬೇಕಾದರೆ ಮೊತ್ತ ಮೊದಲು ಆ ಮನೆಯೂ ಜಂಟಿ ಹೆಸರಿನಲ್ಲಿ ಇರಬೇಕಾದುದು ಅತ್ಯಗತ್ಯ. ಅದರಲ್ಲೂ ಇಬ್ಬರ ಪಾಲು ಶೇ.50-ಶೇ.50 (ಅಥವಾ ಸಂದರ್ಭಾನುಸಾರ ಬೇರಾವುದೇ ಅನುಪಾತ) ಎಂಬುದನ್ನು ಸರಿಯಾಗಿ ಟೈಟಲ್ ಡೀಡ್‌ನ‌ಲ್ಲಿ ದಾಖಲಿಸಿಕೊಳ್ಳಬೇಕು. ಆಮೇಲೆ ಬ್ಯಾಂಕ್‌ ಸಾಲವನ್ನು ಮತ್ತದರ ಮಾಸಿಕ ಪಾವತಿಯನ್ನೂ (ಇಎಮ್ಐ) ಕೂಡಾ ಅದೇ ಅನುಪಾತದಲ್ಲಿ ಹಂಚಿಕೊಳ್ಳಬೇಕು. ಇವೆಲ್ಲವನ್ನೂ ಬ್ಯಾಂಕಿನ ಅಧಿಕಾರಿಗಳೊಂದಿಗೂ ಚರ್ಚಿಸಬೇಕು. ಹಾಗೆ ಸರಿಯಾದ ಕಾಗದ ಪತ್ರಗಳನ್ನು ಅನುಸರಿಸಿದರೇನೇ ಇಬ್ಬರಿಗೂ ಅವರವರ ಪಾಲಿನ ಬಡ್ಡಿಯ ಮೇಲೆ ಕರ ವಿನಾಯತಿ ಲಬಿಸೀತು.

Advertisement

Udayavani is now on Telegram. Click here to join our channel and stay updated with the latest news.

Next