Advertisement

ವಿದ್ಯುತ್‌ ಹೊರೆ ತಗ್ಗಿಸಲು ಸರಕಾರದಿಂದ ಲೆಕ್ಕಾಚಾರ

11:49 PM Oct 09, 2022 | Team Udayavani |

ಬೆಂಗಳೂರು: ಇಂಧನ ವೆಚ್ಚ ಹೊಂದಾಣಿಕೆ ನೆಪದಲ್ಲಿ ಈಚೆಗೆ ಮಾಡಲಾದ ವಿದ್ಯುತ್‌ ದರ ಹೆಚ್ಚಳಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ “ಹೊರೆ’ ತಗ್ಗಿಸುವ ಚಿಂತನೆ ಸರಕಾರದ ಮಟ್ಟದಲ್ಲಿ ಆರಂಭ ವಾಗಿದ್ದು, ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

Advertisement

ಏಳು ತಿಂಗಳ ಅಂತರದಲ್ಲಿ ಎರಡು ಬಾರಿ ವಿದ್ಯುತ್‌ ದರ ಹೆಚ್ಚಿಸಲಾಗಿತ್ತು. ಇಂಧನ ವೆಚ್ಚ ಹೊಂದಾಣಿಕೆಗಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್‌ಗೆ 43 ಪೈಸೆ ಏರಿಸಲಾಗಿತ್ತು. ಇತರ ಎಸ್ಕಾಂ ಗಳಲ್ಲಿ ದರ ಪರಿಷ್ಕರಿಸಲಾಗಿತ್ತು. ಇದಕ್ಕೆ ಕೈಗಾರಿಕೆ ಸಹಿತ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ವಿದ್ಯುತ್‌ ತೆರಿಗೆ ಶೇ. 9ರಷ್ಟಿದ್ದು, ಈ ಮೂಲದಿಂದ ಸರಕಾರಕ್ಕೆ ವಾರ್ಷಿಕ ಸುಮಾರು 2,823 ಕೋಟಿ ರೂ. ಆದಾಯ ಬರುತ್ತಿದೆ. ಇದನ್ನು ಶೇ. 6-7ಕ್ಕೆ ತಗ್ಗಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಕ್ರಮದಿಂದ ಕೈಗಾರಿಕ ವಲಯವನ್ನು ಸೆಳೆಯುವುದರ ಜತೆಗೆ ಎಸ್ಕಾಂಗಳಿಂದ ವಿಮುಖವಾದ ಉದ್ಯಮಗಳನ್ನೂ ಆಕರ್ಷಿಸಬಹುದು. ಇದರಿಂದ ಉತ್ಪಾದಕತೆ ಹೆಚ್ಚಲಿದ್ದು, ಪರೋಕ್ಷವಾಗಿ ಸರಕಾರಕ್ಕೆ ಜಿಎಸ್‌ಟಿ ರೂಪದಲ್ಲಿ ವಾಪಸ್‌ ಬರಲಿದೆ. ಈ ಮೂಲಕ ತೆರಿಗೆ ಇಳಿಕೆಯಿಂದ ಆಗಬಹುದಾದ ಆದಾಯ ಖೋತಾ ವನ್ನು ಸರಿದೂಗಿಸಬಹುದು ಎಂಬ ಆಲೋಚನೆ ನಡೆದಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಚುನಾವಣೆ ಕಾರಣ?
ರಾಜ್ಯದಲ್ಲಿ ಸದ್ಯದಲ್ಲೇ ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗಳು ನಡೆಯಲಿದ್ದು, ಆಗ ದರ ಹೆಚ್ಚಳವು ವಿಪಕ್ಷಗಳಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಹೀಗಾಗಿ ತೆರಿಗೆ ಹೊರೆ ತಗ್ಗಿಸಿ ವಿಪಕ್ಷಕ್ಕೆ ತಿರುಗೇಟು ನೀಡುವ ತಂತ್ರವೂ ಇದರ ಹಿಂದಿದೆ ಎನ್ನಲಾಗಿದೆ.

ನವೆಂಬರ್‌ನಲ್ಲಿ ಜಾಗತಿಕ ಹೂಡಿಕೆ ದಾರರ ಸಮಾವೇಶದ ಮೂಲಕ ಕೈಗಾರಿಕೆಗಳನ್ನು ಆಕರ್ಷಿಸುವ ಯೋಜನೆ ರೂಪಿಸಲಾಗಿದೆ. ಪರ್ಯಾಯ ಮಾರ್ಗಗಳಿಂದ ವಿದ್ಯುತ್‌ ದರ ತಗ್ಗಿಸುವ ಮೂಲಕ “ಕೈಗಾರಿಕೆ ಸ್ನೇಹಿ’ಯಾಗಿ ಬಿಂಬಿಸುವ ಲೆಕ್ಕಾಚಾರವಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

Advertisement

ರಾಜ್ಯದಲ್ಲಿ 5.35 ಲಕ್ಷ ಎಲ್‌ಟಿ ಮತ್ತು 15,147 ಎಚ್‌ಟಿ ಕೈಗಾರಿಕೆಗಳಿವೆ. ಈ ಗ್ರಾಹಕರು ಕ್ರಮವಾಗಿ 2,022 ಮಿ.ಯೂ. ಹಾಗೂ 8,037 ಮಿ.ಯೂ. ಬಳಕೆ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಸ್ಕಾಂಗಳ ಧೋರಣೆಯಿಂದ ಕೈಗಾರಿಕೆಗಳು ಮುಕ್ತ ವಿದ್ಯುತ್‌ ಖರೀದಿಯತ್ತ ಮುಖ ಮಾಡುತ್ತಿವೆ. ಈ ಮಧ್ಯೆ ಮತ್ತೆ ವಿದ್ಯುತ್‌ ದರ ಏರಿಕೆಯು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿದ್ಯುತ್‌ ತೆರಿಗೆ ಪ್ರಮಾಣವನ್ನು ಶೇ. 4ಕ್ಕೆ ತಗ್ಗಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ ಆಗ್ರಹಿಸುತ್ತಾರೆ.
ಇಂಧನ ತೆರಿಗೆ ಪ್ರಮಾಣ ತಗ್ಗಿಸಿದರೆ ಸರಕಾರದ ಮೇಲೆ ಹೊರೆ ಬೀಳುವುದಿಲ್ಲ. ಬದಲಿಗೆ ಪರೋಕ್ಷವಾಗಿ ಆದಾಯ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next