ಬೆಂಗಳೂರು/ಶಿರಸಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ಮೂಲದ ಅಬ್ದುಲ್ ಶುಕ್ಕೂರ್(33) ಎಂಬಾತನನ್ನು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೆಲವು ತಿಂಗಳ ಹಿಂದೆ ನಡೆದ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳಿಗೆ ನೆರವು ನೀಡಿದ ಆರೋಪ ಈತನ ಮೇಲಿದೆ. ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ, ರಾಜ್ಯದಲ್ಲಿ ಹಿಂದೆ ನಡೆದ ವಿಧ್ವಂಸಕ ಕೃತ್ಯಗಳ ಉಗ್ರರಿಗೆ ಸಹಕಾರ ನೀಡಿದ ಆರೋಪವೂ ಈತನ ಮೇಲಿದೆ.
ಮಂಗಳವಾರ ಬೆಳಗ್ಗೆ ಎನ್‌ಐಎ ಆರು ಮಂದಿ ಅಧಿಕಾರಿಗಳು ಶಂಕಿತ ಅಬ್ದುಲ್ ಶುಕ್ಕೂರ್‌ನನ್ನು ಬನವಾಸಿಯಲ್ಲಿ ವಶಕ್ಕೆ ಪಡೆದು, ಬೆಂಗಳೂರಿಗೆ ಕರೆ ತಂದಿದ್ದಾರೆ. ಶಂಕಿತನ ಮೇಲೆ ಸಾಮಾ ಜಿಕ ಜಾಲತಾಣದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವ, ಉಗ್ರ ಸಂಘಟನೆಗಳಿಗೆ ನಿರ್ದಿಷ್ಟ ಸಮುದಾಯದ ಯುವಕರನ್ನು ಸೇರಿಸುವ ನಿಟ್ಟಿನಲ್ಲಿ ಭಾಷಣ ಮಾಡುತ್ತಿದ್ದ ಎಂಬ ಆರೋಪ ಇದೆ ಎಂದು ಮೂಲಗಳು ತಿಳಿಸಿವೆ.
ಕೆಫೆ ಸ್ಫೋಟ ಆರೋಪಿಗಳಿಗೆ ನೆರವು
ಮತ್ತೊಂದೆಡೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಸೂತ್ರಧಾರ, ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ತಾಹಾ, ಮುಸಾವೀರ್ ಹುಸೇನ್ ತಲೆಮರೆಸಿಕೊಂಡಾಗ ಅವರಿಗೆ ಆಶ್ರಯಕ್ಕೆ ಸಹಾಯ ಮಾಡಿದ್ದ ಎನ್ನಲಾಗಿದೆ.