Advertisement

ಕಾಡಾ ಎಂಜಿನಿಯರ್ ಲೆಕ್ಕವೇ ಬುಡಮೇಲು; ಹಣ ಉಳಿಸಿಕೊಟ್ಟ ಗುತ್ತಿಗೆದಾರರು

05:54 PM Jan 21, 2021 | Team Udayavani |

ಸಿಂಧನೂರು: ಸಿಮೆಂಟ್‌, ಬಿಣಚೆಕಲ್ಲು ಸೇರಿದಂತೆ ಇತರೆ ಸಾಮಗ್ರಿಯ ಮಾರುಕಟ್ಟೆ ದರವನ್ನು ಗುರುತಿಸುವಲ್ಲಿ ಪಲ್ಟಿ ಹೊಡೆದಿರುವ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಎಂಜಿನಿಯರ್ (ತಾಂತ್ರಿಕ) ವಿಭಾಗಕ್ಕೆ ಖಾಸಗಿ ಎಂಜಿನಿಯರ್ಗಳು ಸಡ್ಡು ಹೊಡೆದಿದ್ದು, ಸರಕಾರಕ್ಕೆ ಬರೋಬ್ಬರಿ ಶೇ.35ರಷ್ಟು ಹಣವನ್ನು ಉಳಿತಾಯ ಮಾಡಿಕೊಟ್ಟಿದ್ದಾರೆ.

Advertisement

ಮಾರುಕಟ್ಟೆಯನ್ನು ಆಧರಿಸಿ ಆಯಾ ಇಲಾಖೆಯ ಡಿಎಸ್‌ಆರ್‌ (ಡಿಸ್ಟ್ರಿಕ್ಸ್‌ ಶೆಡ್ನೂಲ್‌ ರೇಟ್‌) ದರವನ್ನು ಪರಿಷ್ಕರಿಸುವ ಸರಕಾರ ಅದರ ಪ್ರಕಾರ ವಿವಿಧ
ಕಾಮಗಾರಿಗಳ ಅಂದಾಜು ಪಟ್ಟಿ ರೂಪಿಸಲು ದಾರಿ ಮಾಡಿಕೊಡುತ್ತದೆ. ಇದೇ ಅವಕಾಶವನ್ನು ಬಳಸಿಕೊಂಡ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ
ತಾಂತ್ರಿಕ ಸಿಬ್ಬಂದಿ ಪ್ರತಿ ವರ್ಷ ಟೆಂಡರ್‌ನಲ್ಲಿ ಪಲ್ಟಿ ಹೊಡೆದ ಸಂಗತಿ ರಟ್ಟಾಗಿದೆ. ಸರಕಾರಿ ಇಲಾಖೆಯ ಅಧಿಕಾರಿಗಳು ರೂಪಿಸಿದ ಖರ್ಚು-ವೆಚ್ಚದ ಅಂದಾಜು
ಪಟ್ಟಿಯನ್ನು ಗಮನಿಸಿದ ಖಾಸಗಿ ಎಂಜಿನಿಯರ್‌ ಗಳು ಲಕ್ಷಕ್ಕೆ ಶೇ.35ರಷ್ಟು ಹಣವನ್ನು ಉಳಿಸಿಕೊಡಲು ಮುಂದಾಗಿ ಔದಾರ್ಯ ತೋರಿದ್ದಾರೆ.

ಏನಿದು ಲೆಸ್‌ ವ್ಯವಹಾರ?: ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ರೂಪಿಸಿದ ಬಳಿಕ 2005ರ ಪಾರದರ್ಶಕ ಕಾಯಿದೆ ಪ್ರಕಾರ ಟೆಂಡರ್‌
ಆಹ್ವಾನಿಸಿ, ಗುತ್ತಿಗೆದಾರರಿಗೆ ನಿಯಮದ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಸರಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ಮೊತ್ತಕ್ಕೆ ನಮೂದಿಸಿದ ಗುತ್ತಿಗೆದಾರರಿಗೆ ಟೆಂಡರ್‌ ಹರಾಜು ಮಾಡಲಾಗುತ್ತದೆ. ಈ ಹಂತದಲ್ಲಿ ಏನೇ ಸ್ಪರ್ಧೆ ಏರ್ಪಟ್ಟರೂ ಶೇ.10ಕ್ಕಿಂತಲೂ ಕಡಿಮೆ ಮೊತ್ತವನ್ನು ದಾಖಲಿಸಲು ಯಾರೊಬ್ಬರೂ ಮುಂದೆ ಬರುವುದಿಲ್ಲ. ಆದರೆ, ಕಾಡಾ ಇಲಾಖೆಯಿಂದ ಅಚ್ಚುಕಟ್ಟು ವ್ಯಾಪ್ತಿಯ 7 ರಸ್ತೆಗಳನ್ನು ಸುಧಾರಿಸಲು 1 ಕೋಟಿ 98 ಲಕ್ಷ ರೂ.
ಮೊತ್ತದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು. ಗುತ್ತಿಗೆದಾರರ ಪರವಾಗಿರುವ ಎಂಜಿನಿಯರ್ ಗಳು ಶೇ.35ರಷ್ಟು ಕಡಿಮೆ ಮೊತ್ತ ನಮೂದಿಸಿದೆ.

ಸರಕಾರದ ನಿಗದಿಪಡಿಸಿದ ಹಣದ ಪೈಕಿ ಶೇ.65ರಷ್ಟು ಮೊತ್ತದಲ್ಲೇ ಕೆಲಸ ಮುಗಿಸಿಕೊಡುವ ವರದಿ ಸಲ್ಲಿಸಿ ಗುತ್ತಿಗೆ ಪಡೆದಿದ್ದಾರೆ. ಸಹಜವಾಗಿಯೇ ಇದು ಅಚ್ಚರಿಗೆ ಕಾರಣವಾಗಿದ್ದು, ಸರಕಾರಿ ಎಂಜಿನಿಯರ್ ಗಳಿಗೆ ಸಿಮೆಂಟ್‌, ಇಟ್ಟಿಗೆ, ಕಬ್ಬಿಣದ ಬೆಲೆಯ ತಿಳಿವಳಿಕೆ ಇಲ್ಲವೇ? ಎನ್ನುವ ಪ್ರಶ್ನೆಗೆ ನಾಂದಿ ಹಾಡಿದೆ.

ಬೋಗಸ್‌ ಶಂಕೆ: ಸಿಂಧನೂರು ತಾಲೂಕಿನಲ್ಲಿ ಬರುವ ಭೀಮರಾಜ್‌ ಕ್ಯಾಂಪ್‌ನಲ್ಲಿ ರಸ್ತೆ ಮೆಟಲಿಂಗ್‌ಗೆ 30 ಲಕ್ಷ ರೂ., ಜವಳಗೇರಾದಲ್ಲಿ ರಸ್ತೆ ಸುಧಾರಣೆಗೆ
48 ಲಕ್ಷ ರೂ., ಜಂಬುನಾಥನಹಳ್ಳಿಯಲ್ಲಿ ರಸ್ತೆ ಸುಧಾರಣೆಗೆ 18 ಲಕ್ಷ ರೂ., ದೇವರಗುಡಿಯಿಂದ ಮಲ್ಲಾಪುರ ರಸ್ತೆಗೆ 16 ಲಕ್ಷ ರೂ., ಶ್ರೀನಿವಾಸ್‌
ಕ್ಯಾಂಪ್‌ನಿಂದ ತಿಪ್ಪನಹಟ್ಟಿ ಕ್ರಾಸ್‌ ರಸ್ತೆಗೆ 15 ಲಕ್ಷ ರೂ., ಮುಕ್ಕುಂದಾ-ಸಿಂಗಾಪುರದಲ್ಲಿನ ರಸ್ತೆಗೆ 42 ಲಕ್ಷ ರೂ., ಕೆ.ಹೊಸಳ್ಳಿ-ವಿರೂಪಾಪುರ ರಸ್ತೆಗೆ
29.60 ಲಕ್ಷ ರೂ. ಸೇರಿದಂತೆ ಸರಕಾರ 1 ಕೋಟಿ 98 ಲಕ್ಷ ರೂ. ಮೀಸಲಿಟ್ಟಿತ್ತು. ಇದಕ್ಕಿಂತಲೂ ತೀರಾ ಕಡಿಮೆ ಮೊತ್ತದಲ್ಲೇ ಈ ರಸ್ತೆಗಳನ್ನು ಸುಧಾರಣೆ
ಮಾಡಿಕೊಡುವುದಾಗಿ ಗುತ್ತಿಗೆದಾರರು ಟೆಂಡರ್‌ ಪಡೆದಿದ್ದು, ಸರಕಾರಿ ಸಂಬಳ ಪಡೆಯುವ ಎಂಜಿನಿಯರ್‌ಗಳ ಲೆಕ್ಕವನ್ನೇ ಬುಡಮೇಲು ಮಾಡಿದೆ.

Advertisement

ಕಳಪೆ ಕಾಮಗಾರಿಯನ್ನು ನಿರ್ವಹಿಸುವ  ಮೂಲಕ ಬೋಗಸ್‌ ಬಿಲ್‌ ಮಾಡಿಕೊಳ್ಳಲು ಸಾಧ್ಯವಿರುವ ಹಿನ್ನೆಲೆಯಲ್ಲೇ ಗುತ್ತಿಗೆದಾರರು ಸರಕಾರ ರೂಪಿಸಿದ ಅಂದಾಜುಪಟ್ಟಿಗೆ ಸಡ್ಡು ಹೊಡೆದು ಶೇ.65ರಷ್ಟು ಮೊತ್ತದಲ್ಲೇ ಕೆಲಸ ಮುಗಿಸುವ ರಿಸ್ಕ್ ತೆಗೆದುಕೊಂಡಿದ್ದಾರೆಂಬ ಮಾತು ಕೇಳಿಬಂದಿವೆ. ಪ್ರತಿ ವರ್ಷ 5 ರಿಂದ 10 ಕೋಟಿ ರೂ. ಗಳು ಸರಕಾರದಿಂದ ಕಾಡಾಕ್ಕೆ ಬಿಡುಗಡೆಯಾದಾಗ ಕಾಮಗಾರಿ ರೂಪಿಸಿದ ಎಂಜಿನಿಯರ್‌ಗಳಿಗೆ ಸವಾಲು ವಡ್ಡುವ ಬಿಡ್‌ದಾರರು ಶೇ.30ರಿಂದ ಶೇ.35ರಷ್ಟು ಮೊತ್ತವನ್ನು ಲೆಸ್‌ ನಮೂದಿಸಿ, ಸರಕಾರಕ್ಕೆ ಡಿಪಾಸಿಟ್‌ ಮಾಡಿ ಕೆಲಸ ನಿರ್ವಹಿಸುತ್ತಾರೆ. ಸಮರ್ಪಕವಾಗಿ ಕೆಲಸ ಆದಾಗಲೇ ಉಳಿದ ಠೇವಣಿ ಮೊತ್ತವನ್ನು ಕಾಡಾ ಇಲಾಖೆ ಬಿಡುಗಡೆ ಮಾಡಬೇಕು. ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹೊಂದಾಣಿಕೆಯ ಫಲವಾಗಿ ಪಾರದರ್ಶಕ
ನೀತಿಯನ್ನೇ ತಲೆಕೆಳಗು ಮಾಡಲಾಗುತ್ತಿದೆ ಎನ್ನುತ್ತಾರೆ ಬಲ್ಲವರು.

ನನ್ನ ಕ್ಷೇತ್ರದಲ್ಲಿ ಎರಡು ಕೆಲಸಗಳನ್ನು ಕಾಡಾದಿಂದ ಕೈಗೆತ್ತಿಕೊಳ್ಳಲಾಗಿತ್ತು. ಒಂದು ಕಡೆ ಮುಂದೆ ನಿಂತು ಗುಣಮಟ್ಟದ ಕೆಲಸ ತೆಗೆದುಕೊಳ್ಳಲಾಯಿತು. ಆಗ ಲೆಸ್‌ ಹಾಕಿದ ಗುತ್ತಿಗೆದಾರರು 2ನೇ ಕೆಲಸ ಮಾಡದೇ ಬಿಟ್ಟು ಹೋದರು.
ಅಮರೇಗೌಡ ವಿರೂಪಾಪುರ,ಜಿಪಂ ಸದಸ್ಯರು, ಜಾಲಿಹಾಳ ಕ್ಷೇತ್ರ

ಯಾರೋ ಹೊರಗಡೆಯಿಂದ ಬಂದು ಇಂತಹ ವ್ಯತ್ಯಾಸ ಮಾಡುತ್ತಾರೆ. ಯಾವುದೇ ಕೆಲಸ ಇರಲಿ. ಮುಂದೆ ನಿಂತು ಕೆಲಸ ತೆಗದುಕೊಳ್ಳಿ. ಇನ್ನೊಮ್ಮೆ ಸರಕಾರಿ ದರಕ್ಕಿಂತ ಲೆಸ್‌ ಹಾಕುವವರು ಬರುವುದಿಲ್ಲ.
ವೆಂಕಟರಾವ್‌ ನಾಡಗೌಡ,ಶಾಸಕರು, ಸಿಂಧನೂರು

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next