ಪಣಜಿ : ಜುವಾರಿ ನದಿಯ ಮೇಲೆ ನೂತನವಾಗಿ ನಿರ್ಮಿಸಲಾಗಿರುವ ಕೇಬಲ್ ಸ್ಟೈಡ್ ಸೇತುವೆಯನ್ನು ಡಿಸೆಂಬರ್ ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವರು ಸೇತುವೆ ಕಾಮಗಾರಿನನ್ನು ನಡೆಸುತ್ತಿರುವ ಗುತ್ತಿಗೆದಾರ ಕಂಪನಿ ಈ ಹಿಂದೆ ನೀಡಿದ ಅವಧಿಯೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯ ಎಂದು ಹೇಳಿತ್ತು ಅಲ್ಲದೆ ಕೊರೋನಾ ಸಾಂಕ್ರಾಮಿಕ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಸೆಪ್ಟೆಂಬರ್ ತಿಂಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಿದೆ ಹೀಗಾಗಿ ಡಿಸೆಂಬರ್ ನಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಚಿವ ಕಬ್ರಾಲ್ ತಿಳಿಸಿದರು.
ಈ ಸೇತುವೆಯಿಂದ ಸಂಚಾರ ಆರಂಭವಾದ ನಂತರ ಹಳೆ ಸೇತುವೆ ಮೇಲಿನ ಸಂಚಾರದ ಹೊರೆ ಕಡಿಮೆಯಾಗಲಿದೆ. ಇದಲ್ಲದೇ ಈ ಹೆದ್ದಾರಿಯಲ್ಲಿ ಸಂಚಾರವೂ ಸುಗಮವಾಗಲಿದೆ. ಇದುವರೆಗೆ ಬಂಬೋಲಿಯಿಂದ ಅಗಶಿವರೆಗೆ ಶೇ.99ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 92ರಷ್ಟು ಕೇಬಲ್ ಸ್ಟೈಡ್ ಬ್ರಿಡ್ಜ್ ಕಾಮಗಾರಿ ಪೂರ್ಣಗೊಂಡಿದೆ. ಕುಠ್ಠಾಳಿಯಿಂದ ವೆರ್ಣಾವರೆಗೆ ಶೇ.99ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಇದನ್ನೂ ಓದಿ : ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ
ಇನ್ನು ತಿಂಗಳಲ್ಲಿ ಸೇತುವೆಯ ತೂಕ ಮತ್ತಿತರ ಪರೀಕ್ಷೆಗಳನ್ನು ನಡೆಸಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸೇತುವೆ ರಾಜ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಸೇತುವೆ ಯಾವಾಗ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಕುತೂಹಲ ಅನೇಕರಲ್ಲಿದೆ. ಇದೀಗ ಸೇತುವೆ ಸಂಚಾರಕ್ಕೆ ಮುಕ್ತವಾಗಲು ವಾಹನ ಸವಾರರು ಡಿಸೆಂಬರ್ ವರೆಗೆ ಕಾಯಬೇಕಾಗಿದೆ.