Advertisement

ಟ್ರಾಯ್‌ ನೀತಿಗೆ ಕೇಬಲ್‌ ನಿರ್ವಾಹಕರ ಪ್ರತಿಭಟನೆ

02:20 AM Dec 19, 2018 | Karthik A |

ಉಡುಪಿ: ಟ್ರಾಯ್‌ ನೀತಿಯಿಂದ ಆಗುತ್ತಿರುವ ತೊಂದರೆ ವಿರುದ್ಧ ಜಿಲ್ಲಾ ಕೇಬಲ್‌ ಆಪರೇಟರ್‌ಗಳ ಸಂಘದಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. 2019ರ ಜನವರಿಯಿಂದ ಜಾರಿಗೆ ಬರಬಹುದಾದ ಟ್ರಾಯ್‌ ನೂತನ ನೀತಿಯಿಂದ ಕೇಬಲ್‌ ಉದ್ಯಮಕ್ಕೆ ಬಹಳ ಮಾರಕವಾಗಲಿದೆ. ಕೇಬಲ್‌ ಉದ್ಯಮ ನಂಬಿಕೊಂಡಿರುವ ನೂರಾರು ಕುಟುಂಬಗಳು ಬೀದಿ ಪಾಲಾಗಲಿವೆ. ಇದು ವರೆಗೆ ಗ್ರಾಹಕರಿಗೆ ಸುಮಾರು 300ರಿಂದ 400 ಚಾನೆಲ್‌ಗ‌ಳನ್ನು ಕೇವಲ 250 – 300 ರೂ.ಗೆ ಉತ್ತಮ ಸೇವೆ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮದಿಂದ ಅಷ್ಟೇ ಚಾನೆಲ್‌ಗ‌ಳನ್ನು ವೀಕ್ಷಿಸಲು 800-900 ರೂ. ಪಾವತಿಸಬೇಕಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ಕಮಲಾಕ್ಷ ಪೈ ಆರೋಪಿಸಿದರು.

Advertisement

ಡಿಜಿಟಲೈಸೇಶನ್‌ ಆಗುವಾಗ ಸರಕಾರ ಅತ್ಯಂತ ಕಡಿಮೆ ದರದಲ್ಲಿ ಉನ್ನತ ತಂತ್ರಜ್ಞಾನದಲ್ಲಿ ಗ್ರಾಹಕರಿಗೆ ಎಲ್ಲ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಭರವಸೆ ಕೊಟ್ಟಿತ್ತು. ಆದರೆ ನೂತನ ನೀತಿಯಿಂದ ದರ ಹೆಚ್ಚಳ ಅನಿವಾರ್ಯವಾಗಲಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಗ್ರಾಹಕರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು. 

ಇದುವರೆಗೆ ಫ್ರೀ ಟು ಏರ್‌ (ಎಫ್ಟಿಎ) ಚಾನೆಲ್‌ಗ‌ಳಿಗೆ ಯಾವುದೇ ಶುಲ್ಕ ನಿಗದಿ ಮಾಡಿರಲಿಲ್ಲ. ಈಗ 130 ರೂ. ನಿಗದಿ ಮಾಡಲಾಗಿದೆ. ಎಸ್‌ಟಿಬಿ ಕಡ್ಡಾಯ ಮಾಡುವಾಗ ಸರಕಾರ ಪೋರ್ಟಬೆಲಿಟಿ ಸಿಸ್ಟಮ್‌ ಜಾರಿಗೆ ತರುವುದಾಗಿ ಹೇಳಿತು. ಇದನ್ನು ಜಾರಿಗೆ ತರಲು ನೇರವಾಗಿ ಎಂಆರ್‌ಪಿ ಜಾರಿಗೆ ತಂದಿರುವುದರಿಂದ ಉದ್ಯಮಕ್ಕೆ ನಷ್ಟವಾಗಲಿದೆ. ಉಡುಪಿಯಲ್ಲಿ ಸುಮಾರು 360 ನಿರ್ವಾಹಕರಿದ್ದಾರೆ, 1.5 ಲಕ್ಷ ಸಂಪರ್ಕವಿದೆ ಎಂದರು.

ಟ್ರಾಯ್‌ ನಿರ್ದೇಶಕರು ಇದರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ಭ್ರಷ್ಟಾಚಾರ ನಡೆದಿದೆ. ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಪ್ರಧಾನಿಯವರಿಗೆ ಒತ್ತಾಯಿಸುತ್ತಿದ್ದೇವೆ. ಹೊಸ ನೀತಿಯಿಂದ ಹೆಚ್ಚಿನ ಚಾನೆಲ್‌ಗ‌ಳು ಬಂದ್‌ ಆಗಲಿವೆ. ವಿದೇಶೀ ಚಾನೆಲ್‌ಗ‌ಳ ಪ್ರಯೋಜನಕ್ಕಾಗಿ ಇಂತಹ ನೀತಿಯನ್ನು ತರುತ್ತಿದ್ದಾರೆ.  ಗ್ರಾಹಕಸ್ನೇಹಿ ನೀತಿಯನ್ನು ಜಾರಿಗೊಳಿಸಬೇಕು. ಟ್ರಾಯ್‌ ಸಮಿತಿಯಲ್ಲಿ ಕೇಬಲ್‌ ನಿರ್ವಾಹಕರನ್ನು ಸೇರಿಸಬೇಕು. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸೇವೆಗಳು ಸಿಗಬೇಕು ಎಂದು ಕಿರಣ್‌ಕುಮಾರ್‌ ಬೈಲೂರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಳೆ, ಸಿಡಿಲು ಬಂದಾಗ ಎಷ್ಟೇ ನಷ್ಟ ಉಂಟಾದರೂ ಕೇಬಲ್‌ ನಿರ್ವಾಹಕರೇ ನಿಭಾಯಿಸುತ್ತಿದ್ದರು. ಪ್ರತಿ ನಿರ್ವಾಹಕರಡಿ ಬಹಳಷ್ಟು ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ. ಹೊಸ ನೀತಿಯಿಂದ ಉದ್ಯೋಗ ನಷ್ಟ ಭೀತಿಯೂ ಇದೆ ಎಂದರು. ಸಂಸದರನ್ನು ಒತ್ತಾಯಿಸಲಾಗಿದೆ. ಕೇಂದ್ರ ಸಚಿವ ಅರುಣ್‌ ಜೈಟ್ಲಿ ಅವರನ್ನೂ ಸಂಪರ್ಕಿಸಲಾಗುತ್ತಿದೆ ಎಂದು ಸತ್ಯಜಿತ್‌ ಸುರತ್ಕಲ್‌ ಹೇಳಿದರು. ಸಂಘದ ಅಧ್ಯಕ್ಷ ಟಿ.ಕೆ.ಕೋಟ್ಯಾನ್‌, ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಹೆಚ್ಚುವರಿ ಪಾವತಿ
ಉಡುಪಿ ಜಿಲ್ಲೆಯಲ್ಲಿ ಪ್ರತಿ ಕೇಬಲ್‌ ಗ್ರಾಹಕರು 250-300 ರೂ. ದರದಲ್ಲಿ 250-300 ಟಿವಿ ಚಾನೆಲ್‌ಗ‌ಳನ್ನು ವೀಕ್ಷಿಸುತ್ತಿದ್ದರು. ಮುಂದೆ ತಿಂಗಳಿಗೆ 130, ಜಿಎಸ್‌ಟಿ ಸೇರಿ 155ಕ್ಕೆ 100 ಉಚಿತ ಚಾನೆಲ್‌, ಪ್ರತಿ ಪೇ ಚಾನೆಲ್‌ಗೆ 15ರಿಂದ 30 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಕಮಲಾಕ್ಷ ಪೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next