ನವದೆಹಲಿ: ಹಿಮಾಚಲ ಪ್ರದೇಶದ ಪರ್ವಾನೂ ಎಂಬಲ್ಲಿ ಕೇಬಲ್ ಕಾರ್ ನಲ್ಲಿ ತಾಂತ್ರಿಕ ದೋಷದಿಂದಾಗಿ 11 ಮಂದಿ ಪ್ರವಾಸಿಗರು ಆಕಾಶ ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡಿರುವ ಘಟನೆ ಸೋಮವಾರ (ಜೂನ್ 20) ನಡೆದಿದ್ದು, ಈವರೆಗೆ ಇಬ್ಬರ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:16 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿಯರು ವಿವಾಹವಾಗಬಹುದು: ಪಂಜಾಬ್ ಹೈಕೋರ್ಟ್
ಟೆಕ್ನಿಕಲ್ ತಂಡ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ವರದಿ ವಿವರಿಸಿದೆ. 11 ಮಂದಿ ಪ್ರವಾಸಿಗರನ್ನು ಕೇಬಲ್ ಕಾರ್ ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಆಕಾಶ ಮಾರ್ಗದ ಮಧ್ಯೆ ಸಿಲುಕಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಿಂಬರ್ ಟ್ರಯಲ್ ರೆಸಾರ್ಟ್ ಸಿಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಪರ್ವಾನೂ ಅಧಿಕಾರಿ ಚತ್ತಾರ್ ಸಿಂಗ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ಗಂಟೆಗಳಿಂದ ಕೇಬಲ್ ಕಾರ್ ಸಿಲುಕಿಕೊಂಡಿದ್ದು, ಎನ್ ಡಿಆರ್ ಎಫ್ ತಂಡ ಕೂಡಾ ಸ್ಥಳಕ್ಕೆ ಆಗಮಿಸಲಿದೆ ಎಂದು ವರದಿ ಹೇಳಿದೆ.
1992ರಲ್ಲಿಯೂ ಇಂತಹದ್ದೇ ಕೇಬಲ್ ಕಾರ್ ಘಟನೆ ಸಂಭವಿಸಿದ್ದು, ಓರ್ವ ಪ್ರವಾಸಿಗರು ಸಾವನ್ನಪ್ಪಿದ್ದರು. ಆದರೆ ಉಳಿದ ಹತ್ತು ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ ಮತ್ತು ವಾಯುಪಡೆ ರಕ್ಷಿಸಿರುವುದಾಗಿ ವರದಿ ತಿಳಿಸಿದೆ.