Advertisement

ಪ್ರವಾಸಿಗರನ್ನು ಆಕರ್ಷಿಸಲು ರಾಣಿಪುರಂನಲ್ಲಿ ಕೇಬಲ್‌ ಕಾರ್‌

07:39 PM Dec 16, 2019 | Sriram |

ಕಾಸರಗೋಡು: ಕೇರಳದ ಊಟಿ ಎಂದೇ ಖ್ಯಾತಿಗೆ ಪಾತ್ರವಾದ ಹಾಗೂ ಚಾರಣಿಗರ ಸ್ವರ್ಗ ರಾಣಿಪುರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಕೇಬಲ್‌ ಕಾರ್‌ ಯೋಜನೆಯನ್ನು ಜಾರಿಗೊಳಿಸಲು ಸಂಬಂಧಪಟ್ಟ ಇಲಾಖೆ ತುದಿಗಾಲಲ್ಲಿ ನಿಂತಿದ್ದು, ಈ ಬಗ್ಗೆ ಶೀಘ್ರವೇ ಡಿ.ಪಿ.ಆರ್‌. ಸಲ್ಲಿಸುವಂತೆ ಕಂದಾಯ ಸಚಿವ ಇ. ಚಂದ್ರಶೇಖರನ್‌ ಪ್ರವಾಸೋದ್ಯಮ ಇಲಾಖೆಗೆ ನಿರ್ದೇಶಿಸಿದ್ದಾರೆ. ರಾಣಿಪುರಂನಲ್ಲಿ ಹಲವು ಪ್ರವಾಸಿ ಯೋಜನೆಗಳನ್ನು ಸಾಕಾರಗೊಳಿಸಲು 99 ಲಕ್ಷ ರೂ. ವೆಚ್ಚ ನಿರೀಕ್ಷೆಯ ಯೋಜನೆಯನ್ನು ತಯಾರಿಸಲಾಗಿದೆ.

Advertisement

ಸಮುದ್ರ ಮಟ್ಟದಿಂದ 750 ಮೀ. ಎತ್ತರದಲ್ಲಿರುವ ರಾಣಿಪುರಂ ಅತ್ಯುತ್ತಮ ಟ್ರೆಕ್ಕಿಂಗ್‌ ಅನುಭವ ನೀಡುವ ರಮ್ಯ-ರಮಣೀಯ ತಾಣವಾಗಿದ್ದು, ಪ್ರವಾಸಿ ಯೋಜನೆಯಲ್ಲಿ ಮಕ್ಕಳ ಪಾರ್ಕ್‌, ಈಜು ಕೊಳ, ಬಯಲು ರಂಗ ಮಂದಿರ, ಆಯುರ್ವೇದ ಸ್ಪಾ ಸೆಂಟರ್‌ ಮೊದಲಾದ ನಿರ್ಮಾಣಕ್ಕಾಗಿ 99 ಲಕ್ಷ ರೂ. ಮಂಜೂರು ಮಾಡಲಾಗಿದೆ. ಈ ಯೋಜನೆಯ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿದೆ.
ರಾಣಿಪುರಂನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಡಿಟಿಪಿಸಿ ಕಾಟೇಜು ಪರಿಸರದಿಂದ ಹೊಸ ಮಾರ್ಗ ನಿರ್ಮಿ ಸಲಾಗುವುದು. ಈ ದಾರಿ ಯಲ್ಲಿ ಶಿಖರವನ್ನೇರಲು ಅನುವು ಮಾಡಿಕೊಡ ಲಾಗುವುದು. ಶಿಖರವೇರಿದ ಬಳಿಕ ಅರಣ್ಯ ಇಲಾಖೆಯ ಪ್ರಸ್ತುತ ಪ್ರವೇಶ ದ್ವಾರದಿಂದ ಕೆಳಗಿಳಿ ಯಲು ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ.

ಕೇಬಲ್‌ ಕಾರ್‌ ನಿರ್ಮಾಣ
ಕೇರಳದ ಉತ್ತರದ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನಲ್ಲಿ ರಾಣಿಪುರಂ ಕರ್ನಾಟಕದ ಗಡಿಭಾಗದಲ್ಲಿದೆ. ನೈಸರ್ಗಿಕ ಸಂಪನ್ಮೂಲಗಳ ಗಣಿಯಾದ ರಾಣಿಪುರಂ ಗಿರಿಧಾಮದ ಸೌಂದರ್ಯವನ್ನು ಸವಿಯಲು ಎಡಕ್ಕಾನಂ-ರಾಣಿಪುರಂ ಕೇಬಲ್‌ ಕಾರ್‌ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಶೀಘ್ರವೇ ಸಾಕಾರಗೊಳಿಸಿಲು ಕಂದಾಯ ಸಚಿವ ಇ.ಚಂದ್ರಶೇಖರನ್‌ ಪ್ರವಾಸೋದ್ಯಮ ಇಲಾಖೆಗೆ ಡಿಪಿಆರ್‌ ಸಲ್ಲಿಸುವಂತೆ ತಿಳಿಸಿದ್ದಾರೆ.

ಮೊಬೈಲ್‌ ರೇಂಜ್‌
ದಟ್ಟ ಅರಣ್ಯರಾಶಿಯನ್ನು ಹೊಂದಿರುವ ರಾಣಿಪುರಂನಲ್ಲಿ ಸದ್ಯ ಉತ್ತಮವಾಗಿ ಮೊಬೈಲ್‌ ರೇಂಜ್‌ ಇಲ್ಲದಿರುವುದರಿಂದ ಪ್ರವಾಸಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಬಿ.ಎಸ್‌.ಎನ್‌.ಎಲ್‌ ಮತ್ತು ಇತರ ಖಾಸಗಿ ಮೊಬೈಲ್‌ ಕಂಪೆನಿಗಳನ್ನು ಸಂಪರ್ಕಿಸಿ ಉತ್ತಮ ರೇಂಜ್‌ ಲಭಿಸುವಂತೆ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಳ್ಳಲಾಗುವುದೆಂದು ಸಚಿವ ಇ.ಚಂದ್ರಶೇಖರನ್‌ ತಿಳಿಸಿದ್ದಾರೆ.

ಅವಲೋಕನ ಸಭೆ
ರಾಣಿಪುರಂ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಗೊಳಿಸುವ ಸಂಬಂಧ ಕಂದಾಯ ಸಚಿವ ಇ. ಚಂದ್ರಶೇಖರನ್‌ ನೇತೃತ್ವದಲ್ಲಿ ನಡೆದ ಅವಲೋಕನ ಸಭೆಯಲ್ಲಿ ಜಿ. ಪಂ.ಅಧ್ಯಕ್ಷ ಎ.ಜಿ.ಸಿ. ಬಶೀರ್‌, ಪನತ್ತಡಿ ಗ್ರಾ. ಪಂ.ಅಧ್ಯಕ್ಷ ಪಿ.ಜಿ.ಮೋಹನನ್‌, ಪರಪ್ಪ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಪಿ. ರಾಜನ್‌, ಎಡಿಎಂ ಎನ್‌. ದೇವಿದಾಸ್‌, ಡಿಟಿಪಿಸಿ ಪ್ರಾಜೆಕ್ಟ್ ಮ್ಯಾನೇಜರ್‌ ಪಿ. ಸುನಿಲ್‌ ಕುಮಾರ್‌, ಕಾರ್ಯ ದರ್ಶಿ ಬಿಜು ರಾಘವನ್‌, ಡಿ.ಎಫ್‌.ಒ. ಪಿ. ಅನೂಪ್‌ ಕುಮಾರ್‌, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ಸ್ಪೆಶಲ್‌ ಆಫೀಸರ್‌ ಇ.ಪಿ. ರಾಜ್‌ಮೋಹನ್‌, ವೆಳ್ಳರಿಕುಂಡು ತಹಶೀಲ್ದಾರ್‌ ಕುಂಞಿ ಕಣ್ಣನ್‌, ಕಾಂಞಂಗಾಡ್‌ ರೇಂಜ್‌ ಆಫೀಸರ್‌ ಕೆ. ಸತೀಶನ್‌, ಅರಣ್ಯ ಸಂರಕ್ಷಣೆ ಸಮಿತಿ ಅಧ್ಯಕ್ಷ ಎಸ್‌. ಮಧುಸೂದನನ್‌ ಮತ್ತಿ ತ ರರು ಭಾಗವಹಿಸಿದರು.

Advertisement

ರಮ್ಯ-ರಮಣೀಯ ತಾಣ
ರಾಣಿಪುರಂ ಬಹುವಿಧ ಸಸ್ಯವರ್ಗಗಳನ್ನು ಹೊಂದಿರುವ ನಿತ್ಯಹರಿದ್ವರ್ಣ ಕಾಡುಗಳು, ಮನ್ಸೂನ್‌ ಕಾಡುಗಳು ಮತ್ತು ಹಸಿರು ಹುಲ್ಲು ಗಾವಲು ಗಳನ್ನು ಒಳಗೊಂಡಿರುವ ರಮ್ಯ- ರಮಣೀಯ ತಾಣ. ದೈನಂದಿನ ಒತ್ತಡದಿಂದ ನೆಮ್ಮದಿ ಪಡೆಯಲು ರಾಣಿಪುರಂ ಸೂಕ್ತ ಸ್ಥಳವಾಗಿದೆ. ವಾರಾಂತ್ಯವನ್ನು ಪ್ರಕೃತಿ ಜೊತೆ ಕಳೆಯಲು ಇದು ಉತ್ತಮ ಪ್ರವಾಸಿ ಕೇಂದ್ರ. ಕರ್ನಾಟಕದ ತಲಕಾವೇರಿ ಅಭಯಾರಣ್ಯದೊಂದಿಗೆ ರಾಣಿಪುರಂ ಗಡಿ ವಿಲೀನಗೊಂಡಿದೆ. ಕೇರಳದ ಇತರ ಗಿರಿಧಾಮಗಳಂತೆ ರಾಣಿಪುರಂ ಅತ್ಯಂತ ಜನಪ್ರಿಯ ಚಾರಣ ಸ್ಥಳವಾಗಿದೆ. ಎತ್ತರದ ಟ್ರೆಕ್ಕಿಂಗ್‌ ಪಾಯಿಂಟ್‌ನ್ನು “ಮಣಿಮಾಲಾ’ ಎಂದು ಕರೆಯಲಾಗುತ್ತಿದ್ದು, ಹಸಿರ ಸೌಂದರ್ಯ, ಸ್ವತ್ಛವಾದ ತಂಪು ಗಾಳಿ ಚಾರಣದ ದಣಿವು ನಿವಾರಿಸುವಂತೆ ಮಾಡುತ್ತದೆ. ಪ್ರಕೃತಿಯ ಮಡಿಲ ಸೌಂದರ್ಯದಲ್ಲಿ ಆಯಾಸ ಮರೆಯಾಗುತ್ತದೆ. ಚಾರಣ ಮಾಡುವ ವೇಳೆ ಅಪರೂಪದ ಔಷಧೀಯ ಸಸ್ಯಗಳನ್ನು, ವಿವಿಧ ರೀತಿಯ ಜೀವಿಗಳು, ಹಲವು ಪ್ರಭೇದಗಳ ಪಕ್ಷಿಗಳನ್ನೂ ಕಾಣಬಹುದಾಗಿದೆ.

ಹೋಂ ಸ್ಟೇಗೆ ಪ್ರೋತ್ಸಾಹ
ಪನತ್ತಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೋಂ ಸ್ಟೇ ಆರಂಭಿಸಲು ಆಸಕ್ತಿಯುಳ್ಳವರಿಗೆ ಡಿಟಿಪಿಸಿ ನೇತೃತ್ವದಲ್ಲಿ ತರಬೇತಿ ನೀಡಲಾಗುವುದು. ಮಲೆನಾಡು ಪ್ರವಾಸೋದ್ಯಮ ಪ್ರೋತ್ಸಾಹಿಸುವ ಅಂಗವಾಗಿ ಪ್ರಾದೇಶಿಕ ಟೂರಿಸ್ಟ್‌ ಗೈಡ್‌ ತರಬೇತಿ ನೀಡಲಾಗುವುದು. ಪಂಚಾಯತ್‌ನ ನೇತೃತ್ವದಲ್ಲಿ ಆಯ್ಕೆಯಾದವರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಇನ್ನಷ್ಟು ರಾಜ್ಯ ಸಾರಿಗೆ ಬಸ್‌ಗಳ ಸೇವೆ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ರಾಣಿಪುರಂ ಗಿರಿಧಾಮಕ್ಕೆ ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುವುದು.
– ಪಿ.ಸುನಿಲ್‌ ಕುಮಾರ್‌,
ಡಿಟಿಪಿಸಿ ಪ್ರಾಜೆಕ್ಟ್ ಮ್ಯಾನೇಜರ್‌.

Advertisement

Udayavani is now on Telegram. Click here to join our channel and stay updated with the latest news.

Next