ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಬಹುತೇಕವಾಗಿ ಜುಲೈ 08ರಂದು ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ,ಎಲ್, ಸಂತೋಷ್ ಅವರ ಜತೆ ಸೋಮವಾರ ಮಾತುಕತೆ ನಡೆಸಿದ್ದು, ಮೂಲಗಳ ಪ್ರಕಾರ, ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರಿಗೆಲ್ಲಾ ಸ್ಥಾನ ಕೊಡಬೇಕು ಎಂಬುದನ್ನು ಅಂತಿಮಗೊಳಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ಹದಗೆಟ್ಟ ಭದ್ರತಾ ಪರಿಸ್ಥಿತಿ: ಭಾರತದ ಪ್ರಜೆಗಳ ಸ್ಥಳಾಂತರಕ್ಕೆ ನಿರ್ಧಾರ
ಮಂಗಳವಾರ(ಜುಲೈ 06) ಸಂಜೆ ನಡೆಯಬೇಕಾಗಿದ್ದ ಅಮಿತ್ ಶಾ, ಬಿಜೆಪಿ ವರಿಷ್ಠ ಜೆಪಿ ನಡ್ಡಾ ಹಾಗೂ ರಾಜಸ್ಥಾನ್ ಸಿಂಗ್ ಸೇರಿದಂತೆ ಉನ್ನತ ಸಚಿವರ ಜತೆಗಿನ ಸಭೆ ರದ್ದುಗೊಂಡಿದೆ. 2019ರ ಮೇ ನಲ್ಲಿ ಬಿಜೆಪಿ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ನಂತರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಗೆ ಪ್ರಧಾನಿ ಮೋದಿ ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಮೋದಿ ಸರ್ಕಾರದ ಜತೆ ಕೈಜೋಡಿಸಿದ ಜೆಡಿಯು?
ಮುಂಬರುವ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಜತೆ ಜೆಡಿಯು ಕೂಡಾ ಕೈಜೋಡಿಸಲಿದೆ ಎಂದು ಜೆಡಿಯು ಬಿಹಾರ ಘಟಕದ ಅಧ್ಯಕ್ಷ ಉಮೇಶ್ ಕುಶ್ವಾಹ್ ಇಂಡಿಯಾ ಟುಡೇ ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.
ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಯಾರು ಸೇರ್ಪಡೆಗೊಳ್ಳಲಿದ್ದಾರೆ ಎಂಬ ನಿರ್ಧಾರವನ್ನು ನಿತೀಶ್ ಕುಮಾರ್ ಅವರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು.
ದೆಹಲಿಗೆ ಆಗಮಿಸಿದ ಜ್ಯೋತಿರಾದಿತ್ಯ ಸಿಂದಿಯಾ:
ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂದಿಯಾ ಅವರು ಮಧ್ಯಪ್ರದೇಶದ ದೇವಾಸ್ ಭೇಟಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಮಂಗಳವಾರ ಮಧ್ಯಾಹ್ನ ಇಂದೋರ್ ನಿಂದ ದೆಹಲಿಗೆ ಆಗಮಿಸಲಿದ್ದಾರೆ ಎಂದು ವರದಿ ವಿವರಿಸಿದೆ. ಮಹಾರಾಷ್ಟ್ರದಿಂದ ನಾರಾಯಣ್ ರಾಣೆ, ಪಶ್ಚಿಮಬಂಗಾಳದಿಂದ ಶಾಂತನು ಠಾಕೂರ್ ಮತ್ತು ಅಸ್ಸಾಂನಿಂದ ಸರ್ಬಾನಂದಾ ಸೋನೊವಾಲ್ 3ಗಂಟೆಗೆ ದೆಹಲಿಗೆ ಆಗಮಿಸಿದ್ದಾರೆ.