Advertisement

IAS ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಪುಟ ಸಭೆ ತೀರ್ಮಾನ

11:21 PM Oct 05, 2023 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ನಡೆದ ಅಕ್ರಮ ಹಾಗೂ ಅಪೂರ್ಣ ಯೋಜನೆ ಜಾರಿ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಹಾಗೂ ಸಿವಿಲ್‌ ಮೊಕದ್ದಮೆ ಹೂಡಿ ಕ್ರಮ ತೆಗೆದುಕೊಳ್ಳುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

Advertisement

2015-16ರಲ್ಲಿ ನಡೆದ ಈ ಅಕ್ರಮಕ್ಕೆ ಸಂಬಂಧಿಸಿ ಐಎಎಸ್‌ ಅಧಿಕಾರಿಗಳಾದ ಎಂ.ಬಿ.ರಾಜೇಶ್‌ ಗೌಡ, ಜಯವಿಭವ ಸ್ವಾಮಿ, ಎಸ್‌.ನವೀನ್‌ ಕುಮಾರ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಾದ ಹನುಮಂತರಾಯ, ಎಂ.ಎನ್‌.ಅಲಿಪುರ್‌ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2015-16ರಲ್ಲಿ ಸುಮಾರು 862.37 ಕೋಟಿ ರೂ. ವೆಚ್ಚದಲ್ಲಿ ಒಟ್ಟು 163 ಉಗ್ರಾಣ ನಿರ್ಮಾಣ ಹಾಗೂ 89 ಉಗ್ರಾಣಗಳಿಗೆ ಮೂಲಸೌಕರ್ಯ ಕಲ್ಪಿಸಲು ಈ ಯೋಜನೆ ರೂಪಿಸಲಾಗಿತ್ತು. ಆದರೆ ಈ ಕಾಮಗಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ಸಂಧಾನದ ಮೂಲಕ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ಅನಿವಾರ್ಯತೆ ಸರಕಾರಕ್ಕೆ ಎದುರಾಗಿತ್ತು. ಗುತ್ತಿಗೆದಾರರಿಗೆ 126.34 ಕೋಟಿ ರೂ. ಮಧ್ಯಸ್ಥಿಕೆ ಪ್ರಕಾರ ಪಾವತಿಸಲು ನಿರ್ಧರಿಸಲಾಗಿತ್ತು. ಇದನ್ನೂ ಒಳಗೊಂಡಂತೆ ಬಾಕಿ ಕಾಮಗಾರಿ ಪೂರ್ಣಗೊಳಿಸುವುದಕ್ಕೆ 376.54 ಕೋ. ರೂ. ಬಿಡುಗಡೆ ಮಾಡುವುದಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

ಸಂಪುಟದ ಇತರ ತೀರ್ಮಾನಗಳು

 ಆರೋಗ್ಯ ಇಲಾಖೆ ಹಾಗೂ ನಿಮ್ಹಾನ್ಸ್‌ ಸಹಯೋಗದೊಂದಿಗೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 25 ಕೋ. ರೂ. ವೆಚ್ಚದಲ್ಲಿ ಮೆದುಳಿನ ಆರೋಗ್ಯ, ಆರೈಕೆ ಯೋಜನೆ ಜಾರಿ.
 ರಕ್ತ ಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಜಾರಿಗೆ 185.74 ನಿಗದಿಗೆ ಒಪ್ಪಿಗೆ.
 ಬಳ್ಳಾರಿ ನಗರ ಕಾನೂನು ಸಂಕೀರ್ಣದ 120 ಕೋಟಿ ರೂ. ಯೋಜನೆಯನ್ನು ಮುಂದುವರಿದ ಕಾಮಗಾರಿಗಾಗಿ 121.90 ಕೋ. ರೂ. ಪರಿಷ್ಕೃತ ಆದೇಶ.
 ಕರ್ನಾಟಕ ಗೃಹ ಮಂಡಳಿಯ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಸಾಮಾನ್ಯ ನೀತಿ ರೂಪಿಸಲು ಸಂಪುಟದ ಒಪ್ಪಿಗೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡದಂಥ ನಗರಗಳಲ್ಲಿ ಭೂಮಿಯನ್ನು ಗ್ರಾಮೀಣ ಪ್ರದೇಶದ ಜಮೀನಿಗೆ ವಿಭಿನ್ನವಾಗಿ ಪರಿಗಣಿಸಬೇಕಾಗುತ್ತದೆ. ಪ್ರತಿಯೊಂದು ಯೋಜನೆಯೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವುದರಿಂದ ಒಂದೇ ನೀತಿ ಕಷ್ಟ. ಹೀಗಾಗಿ ಬೇರೆ ಬೇರೆ ಜಿಲ್ಲೆಗೆ ಇದು ಪ್ರತ್ಯೇಕವಾಗಿರುತ್ತದೆ. ಜತೆಗೆ ಗೃಹ ಮಂಡಳಿಯ ಎಲ್ಲ ವಸತಿ ಯೋಜನೆಗಳ ಪ್ರಕರಣವಾರು ಅನುಪಾತ ನಿರ್ಧರಿಸಲು ಇನ್ನು ಮುಂದೆ ಸಂಪುಟದ ಒಪ್ಪಿಗೆ ಅನಿವಾರ್ಯವಾಗಿರುತ್ತದೆ.
 ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ತಂಡದ ಪ್ರವಾಸದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆಗೆ ಮಾಹಿತಿ ನೀಡಿದ್ದು, ವರದಿ ತಯಾರಿಸಲು ಶ್ರಮಿಸಿದ ಅಧಿಕಾರಿಗಳನ್ನು ಪ್ರಶಂಸಿಸಲು ಸಂಪುಟ ತೀರ್ಮಾನಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next