Advertisement

ಡಿ.22ಕ್ಕೆ ಸಂಪುಟ ವಿಸ್ತರಣೆ

06:00 AM Dec 06, 2018 | Team Udayavani |

ಬೆಂಗಳೂರು: ಬೆಳಗಾವಿ ಅಧಿವೇಶನ ಮುಗಿದ ಮರುದಿನ ಅಂದರೆ ಡಿ.22ಕ್ಕೆ ಸಂಪುಟ ವಿಸ್ತರಣೆ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆ ನಿರ್ಧರಿಸಿದೆ. 

Advertisement

ಅದೇ ದಿನ ಒಟ್ಟು 30 ನಿಗಮ, ಮಂಡಳಿ ಅಧ್ಯಕ್ಷರು ಹಾಗೂ ಆರು ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಪ್ರಕ್ರಿಯೆ ನಡೆಸಲೂ ತೀರ್ಮಾನಿಸಲಾಗಿದೆ.

ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಅವರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಾಕಿ ಇರುವ ಎಂಟು ಸಚಿವ ಸ್ಥಾನಗಳನ್ನು ಡಿ.22ಕ್ಕೆ ಭರ್ತಿ ಮಾಡಲಾಗುವುದು ಎಂದು ಪ್ರಕಟಿಸಿದರು.

ಡಿ.9ರಂದು ಒಳ್ಳೆಯ ದಿನವಾಗಿದ್ದ ಕಾರಣ ಅದೇ ದಿನ ಸಂಪುಟ ವಿಸ್ತರಣೆಗೆ ಚಿಂತಿಸಲಾಗಿತ್ತು. ಆದರೆ ಮರುದಿನವೇ ಬೆಳಗಾವಿ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಡಿ.22ರಂದು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಧಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರೊಂದಿಗೂ ಮಾತುಕತೆ ನಡೆಸಲಾಗಿದೆ. ರಾಹುಲ್‌ಗಾಂಧಿಯವರೊಂದಿಗೆ ಚರ್ಚಿಸಿ ಸಚಿವ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಸಂಪುಟ ವಿಸ್ತರಣೆಯಂದೇ  20 ನಿಗಮ, ಮಂಡಳಿಗಳಿಗೆ ಕಾಂಗ್ರೆಸ್‌ನಿಂದ ಹಾಗೂ 10 ನಿಗಮ, ಮಂಡಳಿಗಳಿಗೆ ಜೆಡಿಎಸ್‌ನಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಹಾಗೆಯೇ ಕಾಂಗ್ರೆಸ್‌ನಿಂದ ನಾಲ್ಕು ಹಾಗೂ ಜೆಡಿಎಸ್‌ನಿಂದ ಇಬ್ಬರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗುವುದು. ನಿಗಮ, ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಬಹುಪಾಲು ಶಾಸಕರನ್ನೇ ನೇಮಕ ಮಾಡಲಾಗುವುದು ಎಂದು ವಿವರಿಸಿದರು.

Advertisement

ಬಹಳ ದಿನಗಳ ಬಳಿಕ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಸರ್ಕಾರದ ಆಡಳಿತ ಸುಗಮವಾಗಿ ನಡೆಯಲು ಅನುಸರಿಸಬೇಕಾದ ಕ್ರಮ, ಶಾಸಕರ ಕ್ಷೇತ್ರಗಳ ಅಭಿವೃದ್ಧಿ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌, ಜೆಡಿಎಸ್‌ನ ಯಾವ ಶಾಸಕರು ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ ಎಂದು ಈಗಾಗಲೇ ಸತೀಶ್‌ ಜಾರಕಿಹೊಳಿಯವರು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಈ ರೀತಿಯ ಊಹಾಪೋಹಗಳನ್ನು ಸೃಷ್ಟಿಸುತ್ತಿರುವವರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಸಚಿವ ರಮೇಶ್‌ ಜಾರಕಿಹೊಳಿಯವರು ಐದಾರು ಸಂಪುಟ ಸಭೆಗಳಿಗೆ ಹಾಜರಾಗಿಲ್ಲ ಎಂದ ಮಾತ್ರಕ್ಕೆ ಪಕ್ಷ ತೊರೆಯುತ್ತಾರೆ ಎನ್ನುವುದು ಸರಿಯಲ್ಲ. ಸಂಪುಟ ಸಭೆಗಳಿಗೆ ಹಾಜರಾಗುವಂತೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಹಿಂದೊಮ್ಮೆ ಆಪರೇಷನ್‌ ಕಮಲ ನಡೆಸಿ ಯಶಸ್ವಿಯಾಗಿದ್ದರಿಂದ ಪದೇ ಪದೇ ಆ ರೀತಿ ಆಗಲಿದೆ ಎಂದು ಕನಸು ಕಾಣುತ್ತಿದ್ದಾರೆ. ಅವರು ಕನಸು ನನಸಾಗದು ಎಂದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಶಾಸಕರು ಪಕ್ಷ ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದಾರೆ. ಯಾರಿಗೂ ಅಸಮಾಧಾನವಿಲ್ಲ. ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದು, ನನ್ನನ್ನು ಭೇಟಿಯಾಗಿ ಶಾಸಕರು ಚರ್ಚಿಸುತ್ತಾರೆ. ಐದು ವರ್ಷ ಸರ್ಕಾರ ಸುಭದ್ರವಾಗಿರಲಿದೆ. ಹಾಸನದ ಕೆಲ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಸೂಚ್ಯವಾಗಿ ಹೇಳಿದರು.

ಶಾಸಕಂಗ ಸಭೆ ಮುಂದೂಡಿಕೆ:
ಡಿ.8ಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ ನಿಗದಿಯಾಗಿತ್ತು. ಆದರೆ ಅದನ್ನು ಮುಂದೂಡಲಾಗಿದ್ದು, ಬೆಳಗಾವಿಯಲ್ಲಿ ನಡೆಸಲಾಗುವುದು. ವಿಧಾನ ಪರಿಷತ್‌ ಸಭಾಪತಿ ಆಯ್ಕೆ ಬಗ್ಗೆ ಗುರುವಾರ ಚರ್ಚಿಸಲಾಗುವುದು ಎಂದಷ್ಟೇ ಹೇಳಿದರು.
ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ, ಕರ್ನಾಟಕದಲ್ಲಿ ಭೂಕಂಪವಾಗುವುದಿಲ್ಲ. ಬದಲಿಗೆ ಡಿ.11ರಂದು ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಘಡದಲ್ಲಿ ಭೂಕಂಪಕ್ಕಾಗಿ ಬಿಜೆಪಿ ಕಾಯಬೇಕು. ರಾಜ್ಯದಲ್ಲಿ ಜೆಡಿಎಸ್‌ ಐದು ವರ್ಷ ಪೂರ್ಣಗೊಳಿಸದೆ. ಡಿ.22ರಂದು ಸಂಪುಟ ವಿಸ್ತರಣೆ ಸಂಬಂಧ ಸಭೆಯಲ್ಲೇ ಎಚ್‌.ಡಿ.ದೇವೇಗೌಡರು ಹಾಗೂ ರಾಹುಲ್‌ ಗಾಂಧಿಯವರೊಂದಿಗೆ ಚರ್ಚಿಸಿ ನಂತರ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜಾಬ್ಡೇಕರ್‌ಗೆ ಏನೂ ಗೊತ್ತಿಲ್ಲ
ಕರ್ನಾಟಕದಲ್ಲಿ ಸದ್ಯದಲ್ಲೇ ರಾಜಕೀಯ ಭೂಕಂಪವಾಗಲಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾವ ದೇಶದಲ್ಲಿ ಭೂಕಂಪವಾಗಲಿದೆಯಂತೆ ಎಂದು ಪ್ರಶ್ನಿಸಿದರು. ಬಳಿಕ ಮಾತು ಮುಂದುವರಿಸಿ, ಜಾಬ್ಡೇಕರ್‌ ಅವರು ಇನ್ನೊಂದು ಮಾತು ಹೇಳಿದ್ದು, ಭೂಕಂಪದ ಬಗ್ಗೆ ಯಡಿಯೂರಪ್ಪ ಅವರಿಗೆ ಗೊತ್ತು ಎಂದು ಹೇಳಿದ್ದಾರೆ. ಹಾಗಾಗಿ ಜಾಬ್ಡೇಕರ್‌ ಅವರಿಗೆ ಏನೂ ಗೊತ್ತಿಲ್ಲ ಎಂಬುದು ಸ್ಪಷ್ಟ. ಪಂಚ ರಾಜ್ಯಗಳ ಚುನಾವಣೆ ನಡೆದಿದ್ದು, ಎಲ್ಲ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next