Advertisement

ಪಕ್ಷೇತರರಿಗೆ ಲಕ್‌ ಪಕ್ಕಾ

02:00 AM Jun 14, 2019 | Team Udayavani |

ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ನಡೆಯಲಿದ್ದು, ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಹಾಗೂ ನಾಗೇಶ್‌ ಸಂಪುಟ ಸೇರ್ಪಡೆಯಾಗುವುದು ಖಚಿತವಾಗಿದೆ.

Advertisement

ಮಧ್ಯಾಹ್ನ 1 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಇಬ್ಬರ ಜತೆಗೆ ಜೆಡಿಎಸ್‌ ಕೋಟಾದಡಿ ಖಾಲಿ ಇರುವ ಮತ್ತೂಂದು ಸಚಿವ ಸ್ಥಾನ ಬಿ.ಎಂ.ಫಾರೂಕ್‌ ಅವರಿಗೆ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನಿಂದ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರಿಂದ ತೆರವಾಗಿರುವ ಸ್ಥಾನ ರಾಣಿಬೆನ್ನೂರಿನ ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಜೆಡಿಎಸ್‌ ಕೋಟಾದಡಿ ಸಚಿವರಾಗಿದ್ದ ಬಿಎಸ್‌ಪಿಯ ಎನ್‌.ಮಹೇಶ್‌ ಅವರಿಂದ ತೆರವಾಗಿರುವ ಸ್ಥಾನ ಮುಳಬಾಗಿಲು ಪಕ್ಷೇತರ ಶಾಸಕ ಎನ್‌.ನಾಗೇಶ್‌ ಅವರಿಗೆ ನೀಡಲು ನಿರ್ಧರಿಸಲಾಗಿದೆ.

ಸಮುದಾಯದ ಪ್ರಾತಿನಿಧ್ಯ ದೃಷ್ಟಿಯಿಂದಲೂ ಕುರುಬ ಹಾಗೂ ದಲಿತ ಸಮುದಾಯಕ್ಕೆ ನೀಡಲಾಗಿದ್ದ ಸಚಿವ ಸ್ಥಾನ ಅದೇ ಸಮುದಾಯದವರಿಗೆ ನೀಡಲಾಗುತ್ತಿದೆ. ಜೆಡಿಎಸ್‌ನಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಸದಸ್ಯ ಬಿ.ಎಂ.ಫ‌ರೂಕ್‌ ಹೆಸರು ಕೇಳಿಬರುತ್ತಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಡುವೆ ಆಗಿರುವ ಮಾತುಕತೆ ಪ್ರಕಾರ ಸದ್ಯಕ್ಕೆ ಇಬ್ಬರು ಪಕ್ಷೇತರ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ.

Advertisement

ಈ ಮಧ್ಯೆ, ಜೆಡಿಎಸ್‌ನಿಂದ ಸಹಕಾರ ಸಚಿವರಾಗಿರುವ ಬಂಡೆಪ್ಪ ಕಾಶೆಂಪೂರ್‌ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಅವರನ್ನು ಜೆಡಿಎಸ್‌ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಎಚ್.ವಿಶ್ವನಾಥ್‌ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಪಕ್ಷದ ವಲಯದಲ್ಲಿ ಆ ಬಗ್ಗೆ ಯಾವುದೇ ಚರ್ಚೆಯಿಲ್ಲ. ಸದ್ಯಕ್ಕೆ ಸಂಪುಟ ವಿಸ್ತರಣೆಯಷ್ಟೇ ಎಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆಗೆ ಮಾತ್ರ ಸೀಮಿತವಾದರೆ ಇಬ್ಬರು ಪಕ್ಷೇತರರಿಗೆ ಮಾತ್ರ ಅವಕಾಶ. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು ತೀರ್ಮಾನಿಸಿದರೆ ಪರಿಷತ್‌ ಸದಸ್ಯ ಬಿ.ಎಂ.ಫ‌ರೂಕ್‌ಗೂ ಚಾನ್ಸ್‌ ಸಿಗಬಹುದು. ಆದರೆ, ಸಂಪುಟ ಪುನಾರಚನೆ ಅನುಮಾನ ಎನ್ನಲಾಗಿದೆ.

ಕಾಯಲು ಸೂಚನೆ

ಸಮ್ಮಿಶ್ರ ಸರ್ಕಾರ ಎರಡು ವರ್ಷ ಪೂರೈಸಿದ ನಂತರ ಸಂಪುಟ ಪುನಾರಚನೆ ಮಾಡಿ ಕೆಲವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ ಹೊಸಬರಿಗೆ ಅವಕಾಶ ಕೊಡಲಾಗುವುದು. ಮುಂದಿನ ಮೂರು ವರ್ಷ ಸಚಿವರಾಗಲು ಅವಕಾಶ ಮಾಡಿ ಕೊಡಲಾಗುವುದು ಎಂದು ಕಾಂಗ್ರೆಸ್‌ನಲ್ಲಿ ಸಚಿವಾಕಾಂಕ್ಷಿಗಳಿಗೆ ತಿಳಿಸಲಾಗಿದೆ. ಜೆಡಿಎಸ್‌ನಲ್ಲೂ ಎರಡೂವರೆ ವರ್ಷದ ನಂತರ ಹಾಲಿ ಇರುವ ಸಚಿವರನ್ನು ತೆಗೆದು ಹೊಸಬರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಲಾಗಿದೆ. ಆದರೆ, ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹಾಗೂ ಅವಕಾಶ ವಂಚಿತರು ಏನು ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.

ಎಚ್.ವಿಶ್ವನಾಥ್‌ ಅವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಅವರು ರಾಜೀನಾಮೆ ನೀಡಿದ್ದರೂ ಅವರೇ ಆ ಸ್ಥಾನದಲ್ಲಿ ಮುಂದುವರಿಯಬೇಕು ಎಂಬುದು ನಮ್ಮ ಅಭಿಪ್ರಾಯ. ನನ್ನನ್ನು ಜೆಡಿಎಸ್‌ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ವಿಚಾರ ನನಗೆ ಗೊತ್ತಿಲ್ಲ.

-ಬಂಡೆಪ್ಪ ಕಾಶೆಂಪೂರ್‌, ಸಹಕಾರ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next