Advertisement
ಅಸಮಾಧಾನಗೊಂಡಿರುವ ಶಾಸಕರೆಲ್ಲಾ ಒಂದೆಡೆ ಸೇರಿ ಚರ್ಚೆ ನಡೆಸಲಾರಂಭಿಸುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರನ್ನು ಕರೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿಯವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಗೊಂದಲಗಳಿಗೆ ತೆರೆ ಬೀಳುವುದೇ ಎಂಬುದನ್ನು ಕಾದು ನೋಡಬೇಕಿದೆ.
Related Articles
Advertisement
ಅಪ್ಪಚ್ಚು ರಂಜನ್, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ ತಮಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರಗೊಂಡಿದ್ದರೂ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ತಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಹೇಳಿಕೊಂಡರು. ಆದರೆ, ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿತ್ತು.
ಹಾಲಿ ಶಾಸಕರಿದ್ದಾಗ್ಯೂ ಮಾಜಿ ಶಾಸಕರಿಗೆ ಸಚಿವ ಸ್ಥಾನ ನೀಡಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಹಾಗಾಗಿ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ ಅವರು ಭೇಟಿಯಾಗಿ ಚರ್ಚೆ ನಡೆಸಿದರು. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರು ಯಡಿಯೂರಪ್ಪ ನಿವಾಸಕ್ಕೆ ತೆರಳಿ ಶಾಸಕರ ಅತೃಪ್ತಿ ಶಮನಕ್ಕೆ ಕಸರತ್ತು ಆರಂಭಿಸಿದರು.
ಯಡಿಯೂರಪ್ಪ ಸೂಚನೆ ಮೇರೆಗೆ ಸಂಸದ ಜಿ.ಎಂ.ಸಿದ್ದೇಶ್ ಅವರು ಬಾಲಚಂದ್ರ ಜಾರಕಿಹೊಳಿ ಹಾಗೂ ರೇಣುಕಾಚಾರ್ಯ ಅವರನ್ನು ಭೇಟಿಯಾಗಿ ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ನಂತರ ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಉಮೇಶ್ ಕತ್ತಿ ಇತರರು ಒಂದೆಡೆ ಸೇರಿ ಚರ್ಚಿಸಿದ್ದು, ಹಿರಿಯ ನಾಯಕರಲ್ಲಿ ಇನ್ನಷ್ಟು ತಲ್ಲಣ ಸೃಷ್ಟಿಸಿತು.
ಯಡಿಯೂರಪ್ಪ ಸೂಚನೆಯಂತೆ ಅವರ ನಿವಾಸಕ್ಕೆ ತೆರಳಿ ಬಾಲಚಂದ್ರ ಜಾರಕಿಹೊಳಿ ಚರ್ಚಿಸಿದರು. ಆಗ ಯಡಿಯೂರಪ್ಪ ಅವರು ಉಮೇಶ್ ಕತ್ತಿ ಅವರನ್ನು ಸಮಾಧಾನಪಡಿಸುವ ಜವಾಬ್ದಾರಿಯನ್ನು ಬಾಲಚಂದ್ರ ಅವರಿಗೆ ವಹಿಸಿದರು ಎನ್ನಲಾಗಿದೆ. ಭೇಟಿ ಬಳಿಕ ಪ್ರತಿಕ್ರಿಯಿಸಿದ ಬಾಲಚಂದ್ರ ಜಾರಕಿಹೊಳಿ, “ನನಗೆ ವೈಯಕ್ತಿಕವಾಗಿ ಅಸಮಾಧಾನವಿಲ್ಲ. ನಾನು ವೈಯಕ್ತಿಕವಾಗಿ ಸಚಿವಾಕಾಂಕ್ಷಿಯೂ ಆಗಿರಲಿಲ್ಲ.
ಆದರೆ, ಹಿರಿಯರಾದ ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಬೇಸರ ತಂದಿದೆ. ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಅವರಿಗಾದ ಅನ್ಯಾಯ ಸರಿಪಡಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಒಂದೆರಡು ತಿಂಗಳಲ್ಲಿ ನಮ್ಮ ಕುಟುಂಬದಲ್ಲೊಬ್ಬರು ಸಚಿವರಾಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾತ್ರಿ ಉಮೇಶ್ ಕತ್ತಿ ಕೂಡ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಸಚಿವ ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಅವರು ಉಪಸ್ಥಿತರಿದ್ದರು ಎಂದು ಹೇಳಲಾಗಿದೆ. ಆ ಮೂಲಕ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಉಂಟಾಗಿದ್ದ ಅಸಮಾಧಾನ ಒಂದು ಹಂತಕ್ಕೆ ಬಂದಂತಾಗಿದೆಯಾದರೂ, ಮುಂದೆ ಇದು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೆಲವರ ಸೇರ್ಪಡೆಗೆ ಅಸಮಾಧಾನ: ಹಲವರಿಗೆ ಸಚಿವ ಸ್ಥಾನ ಸಿಗದಿರುವುದು ಬೇಸರಕ್ಕೆ ಕಾರಣವಾಗಿದ್ದರೆ, ಇನ್ನೂ ಕೆಲವರಿಗೆ ಅಚ್ಚರಿ ಎಂಬಂತೆ ಕೆಲವರು ಸಚಿವರಾಗಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರು ಸಂಪುಟ ಸೇರಿರುವುದು ಬೆಳಗಾವಿ ಭಾಗದ ಶಾಸಕರು ಸೇರಿದಂತೆ ಹಲವರಿಗೆ ಬೇಸರ ಉಂಟು ಮಾಡಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಉಮೇಶ್ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬವನ್ನು ನಿಯಂತ್ರಿಸುವ ಉದ್ದೇಶದಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಲಕ್ಷ್ಮಣ ಸವದಿಗೆ ಅವಕಾಶ ನೀಡಲಾಗಿದೆ ಎಂಬುದು ಕೆಲ ನಾಯಕರ ಆಕ್ಷೇಪ.