Advertisement

ಸಚಿವ ಸಂಪುಟ ಪುನಾರಚನೆ  : ಜೆಡಿಎಸ್‌ ವರಿಷ್ಠರ ಸಮಾಲೋಚನೆ

06:45 AM Dec 24, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನು ಶನಿವಾರ ರಾತ್ರಿ ಭೇಟಿ ಮಾಡಿ ಸಚಿವ ಸಂಪುಟ ಪುನಾರಚನೆ ಅನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

Advertisement

ಸಂಪುಟ ಪುನಾರಚನೆ, ನಿಗಮ-ಮಂಡಳಿಗಳು, ಸಂಸದೀಯ ಕಾರ್ಯದರ್ಶಿಗಳ ನೇಮಕ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ, ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ರೋಷನ್‌ ಬೇಗ್‌, ತನ್ವೀರ್‌ ಸೇಠ್ ಸಹಿತ ಕೆಲವು ಶಾಸಕರು ಅತೃಪ್ತರಾಗಿರುವುದು ಮತ್ತು ರಮೇಶ್‌ ಜಾರಕಿಹೊಳಿ ಮತ್ತು ಆರ್‌. ಶಂಕರ್‌ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ. ಅದೇ ರೀತಿ ಕಾಂಗ್ರೆಸ್‌ ಪಕ್ಷದಲ್ಲಿನ ಅಸಮಾಧಾನ ಮತ್ತು ಬಿಜೆಪಿಯ ಆಪರೇಷನ್‌ ಕಮಲದ ಕಾರ್ಯತಂತ್ರ ಸಮ್ಮಿಶ್ರ ಸರಕಾರಕ್ಕೆ ಬಾಧಕವಾಗಲಿದೆಯೇ ಎಂಬ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ಜೆಡಿಎಸ್‌ ಪಾಲಿನ 2 ಸಚಿವ ಸ್ಥಾನಗಳನ್ನು ತುಂಬದಿರುವ ಬಗ್ಗೆ ಪಕ್ಷದ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವನ್ನು ಕುಮಾರಸ್ವಾಮಿ,  ದೇವೇಗೌಡರ ಗಮನಕ್ಕೆ ತಂದಿದ್ದು, ಸಚಿವ ಸ್ಥಾನ ಅಲ್ಲದಿದ್ದರೂ, ತಮ್ಮ ಪಾಲಿನ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ, ಸಂಸದೀಯ ಕಾರ್ಯದರ್ಶಿ ಮತ್ತು ರಾಜಕೀಯ ಕಾರ್ಯದರ್ಶಿ ಹುದ್ದೆಗಳಿಗೆ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ನೇಮಿಸಿ, ಅವರಿಗೆ ಅಧಿಕಾರ ಕೊಡುವ ಬಗ್ಗೆ ತೀರ್ಮಾನಿಸಲಾಯಿತು ಎನ್ನಲಾಗಿದೆ.

ಶೀಘ್ರ ಶಾಸಕಾಂಗ ಪಕ್ಷದ ಸಭೆ ಕರೆದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಸಹಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿ ಅಂತಿಮಗೊಳಿಸುವಂತೆ ದೇವೇಗೌಡರು ಸಲಹೆ ನೀಡಿದರು. ಅಲ್ಲದೇ ಜೆಡಿಎಸ್‌ ಪಾಲಿನ 2 ಸಚಿವ ಸ್ಥಾನಗಳನ್ನು ಸಂಕ್ರಾಂತಿ ವೇಳೆಗೆ ಭರ್ತಿ ಮಾಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next