ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಈಗ ಮುಹೂರ್ತ ಫಿಕ್ಸ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪಟ್ಟಿ ಬಹುತೇಕ ಅಖೈರುಗೊಂಡಿದೆ ಎಂದು ತಿಳಿದು ಬಂದಿದೆ.
ಸಂಪುಟ ಪುನಾರಚನೆ ಪಟ್ಟಿಯ ಜತೆಗೆ ನಿಗಮ- ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯನ್ನೂ ಸಿದ್ದಗೊಳಿಸಲಾಗಿದೆ. ಬಿ.ಎಲ್ ಸಂತೋಷ್ , ಪ್ರಹ್ಲಾದ್ ಜೋಷಿ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರ ಸಭೆಯಲ್ಲಿ ಪಟ್ಟಿ ಅಂತಿಮಗೊಂಡಿದೆ.
ಇದನ್ನೂ ಓದಿ:ಪಿಎಸ್ಐ ಹಗರಣದ ಹಿಂದೆ ಇದ್ದಾರೆಯೇ ಪ್ರಭಾವಿ ಸಚಿವ? ಏನಿದು 80 ಲಕ್ಷದ ವಿಚಾರ?
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಬಿಜೆಪಿ ಕಚೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಪಕ್ಷ ಹಾಗೂ ಸರಕಾರದ ನಡುವೆ ಸಮನ್ವಯ ಸಾಧಿಸುವ ಸಾಧ್ಯತೆ ಇದೆ. ಈ ಹಿಂದೆ ನಿಗಮ ಮಂಡಳಿ ಪಟ್ಟಿ ಸಿದ್ದಗೊಂಡಾಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರಿಂದ ನನೆಗುದಿಗೆ ಬಿದ್ದಿತ್ತು.
ಸಿದ್ದಗೊಂಡ ಪಟ್ಟಿಯನ್ನು ಮಂಗಳವಾರ ಅಮಿತ್ ಶಾ ಅವರ ಸಮ್ಮುಖದಲ್ಲಿ ಇಟ್ಟು ಅವರಿಂದ ಒಪ್ಪಿಗೆ ಪಡೆಯಲಾಗುತ್ತದೆ. ನಾಳೆ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಎಲ್ಲ ಚರ್ಚೆಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಜೆಪಿ ನಾಯಕರಲ್ಲಿ ‘ಸಂಕಟ’ ತಂದ ‘ಸಂತೋಷ’ ಹೇಳಿಕೆ; ಬಿಎಲ್ಎಸ್ ನೀಡಿದ ಮಹತ್ವದ ಸುಳಿವೇನು?