ಬೆಂಗಳೂರು: ದೆಹಲಿಗೆ ತೆರಳಿದ ನಂತರ ಸಂಪುಟ ವಿಸ್ತರಣೆ ಬಗ್ಗೆ ಅಲ್ಲಿ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಬಗ್ಗೆ ಮಾತನಾಡಿದ ಬೊಮ್ಮಾಯಿ, ಇದು ಕೇವಲ ಮಾಧ್ಯಮಗಳಿಂದ ಬಂದ ವಿಚಾರ ಅಷ್ಟೇ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಉತ್ತರಾಖಂಡ್: ಹುಟ್ಟೂರಿಗೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದ ಯೋಗಿ ಆದಿತ್ಯನಾಥ್
ಮುಂದಿನ ವಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಓಗಳ ಜೊತೆ ಸಭೆ ನಡೆಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಿಸಿ ಹಾಗೂ ಜಿ.ಪಂ. ಸಿಇಓಗಳ ಸಭೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು. ಬಜೆಟ್ ನಲ್ಲಿ ಘೋಷಿಸಿದ್ದ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಮಾತಾಡಿದ ಬೊಮ್ಮಾಯಿ, ಹಣಕಾಸು ಇಲಾಖೆಯ ಒಪ್ಪಿಗೆ ಪಡೆದು ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆ ಅನುಷ್ಠಾನ ಮಾಡೋದು ಮೊದಲ ಹಂತ. ಇದಕ್ಕೆ ಸಂಬಂಧಿಸಿದಂತೆ ಶೇಕಡ 80 ರಷ್ಟು ಆದೇಶ ಈಗಾಗಲೇ ಆಗಿದೆ. ಕಾನೂನು ಮತ್ತು ತಾಂತ್ರಿಕ ಕಾರಣಕ್ಕೆ ಇನ್ನೂ ಶೇ. 20 ರಷ್ಟು ಯೋಜನೆಗಳಿಗೆ ಸಂಬಂಧಿಸಿದ ಆದೇಶ ಹೊರಬೀಳಲು ಬಾಕಿಯಿದ್ದು, ಶೀಘ್ರವೇ ಆದೇಶ ನೀಡುತ್ತೇವೆ ಎಂದರು.
ಇನ್ನು ಬಜೆಟ್ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಎರಡನೇ ಹಂತವಾಗಿದ್ದು ಅದಕ್ಕೆ ಒಂದು ಸಮಯ ನಿಗದಿ ಮಾಡಬೇಕಿದೆ. ಪ್ರಮುಖ ಇಲಾಖೆಗಳಿಂದ ಹಿಡಿದು ಎಲ್ಲಾ ಇಲಾಖೆಗಳಿಗೂ ಬಜೆಟ್ ಅನಿಷ್ಠಾನ ಕಾಲಮಿತಿ ನಿಗದಿ ಮಾಡುತ್ತೇವೆ.
ಇದಕ್ಕಾಗಿ ಮುಂದಿನ ವಾರ ಡಿಸಿ ಮತ್ತು ಜಿಲ್ಲಾ ಪಂಚಾಯತಿ ಸಿಇಒ ಗಳ ಜೊತೆ ವೀಡಿಯೋ ಕಾನ್ಪೆರೆನ್ಸ್ ಮಾಡುತ್ತೇನೆ ಎಂದಿದ್ದಾರೆ.