ಬೆಂಗಳೂರು: ಆಷಾಢ ಮಾಸ ಮುಗಿದ ಕೂಡಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಸಂಬಂಧ ಆ.15ರ ನಂತರ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಇನ್ನೂ ಅಧಿಕೃತ ತೀರ್ಮಾನ ಆಗಿಲ್ಲ. ಈ ಸಂಬಂಧ ಪಕ್ಷದ ಹಿರಿಯ, ಕಿರಿಯ ಮುಖಂಡರೊಂದಿಗೆ ಚರ್ಚೆ ಮಾಡಲಿದ್ದೇವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಜತೆ ಚರ್ಚಿಸಿ ನಂತರ ಒಮ್ಮತದ ತೀರ್ಮಾನಕ್ಕೆ ಬರಲಿದ್ದೇವೆ ಎಂದು ತಿಳಿಸಿದರು.
ಪಕ್ಷ ಸಂಘಟನೆಗಾಗಿ 21 ಜಿÇÉೆಗಳ ಸಭೆ ಮಾಡಿ ಪ್ರತಿ ಬೂತ್, ವಾರ್ಡ್, ಬ್ಲಾಕ್ ಸಮಿತಿಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ, ಆಸಕ್ತಿಯಿಂದ ಪಕ್ಷದ ಕೆಲಸ ಮಾಡುವವರಿಗೆ ಜವಾಬ್ದಾರಿ ನೀಡಲಿದ್ದೇವೆ ಎಂದರು.
ಸಚಿವರ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಪಕ್ಷದ ಕಚೇರಿಗೆ ತೆರಳಬೇಕು ಎಂದು ಸೂಚನೆ ನೀಡಿದ್ದೇವೆ. ಪಕ್ಷದ ಕಾರ್ಯಕರ್ತರ ಸಮಸ್ಯೆ ಆಲಿಸುವುದು ಅತಿ ಮುಖ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.