Advertisement
ಫಲಿತಾಂಶ ಪ್ರಕಟವಾದ ಬಳಿಕ ಪಕ್ಷದ ವರಿಷ್ಠರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುವುದು ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಗತ್ಯಬಿದ್ದರಷ್ಟೇ ನ. 11ಕ್ಕೆ ದೆಹಲಿ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗಾಗಿ ದೀಪಾವಳಿ ಹಬ್ಬದ ಮೊದಲು ಇಲ್ಲವೇ ನಂತರ ಸಂಪುಟ ವಿಸ್ತರಣೆ ಸನ್ನಿಹಿತನವೆನಿಸಿದೆ.
ಪರಿಷತ್‌ನ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಹು ದೊಡ್ಡ ಅಂತರದಲ್ಲಿ ನಾವು ಈಗಾಗಲೇ ಗೆದ್ದಾಗಿದೆ. ನ. 10ರಂದು ಫಲಿತಾಂಶ ಬಂದಾಗ ಅದು ಗೊತ್ತಾಗಲಿದೆ. ನಾನು ಏನಾದರೂ ಹೇಳಿದರೆ 100 ಬಾರಿ ಯೋಚಿಸಿ, ಲೆಕ್ಕಾಚಾರ ಹಾಕಿ ಹೇಳುತ್ತೇನೆ. ಈವರೆಗೆ ನಾನು ಹೇಳಿರುವುದು ಯಾವುದೂ ವ್ಯತ್ಯಾಸವಾಗಿಲ್ಲ. ಈ ಬಾರಿಯೂ ಹೇಳುತ್ತಿದ್ದೇನೆ. ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ತಿಳಿಸಿದರು.
Related Articles
Advertisement
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿರುವುದರಿಂದ ಪಕ್ಷದ ಗೆಲುವಿಗೆ ಹಿನ್ನಡೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಏನೇನೂ ತೊಂದರೆ ಇಲ್ಲ. ಯಾವುದೇ ಕಾರಣಕ್ಕೂ ತೊಂದರೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಸಂಪುಟದಲ್ಲಿ ಆರು ಸಚಿವ ಸ್ಥಾನ ಖಾಲಿಯಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಿರುವ ಸಿ.ಟಿ. ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ಈವರೆಗೆ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಸದ್ಯದಲ್ಲೇ ಅವರ ರಾಜೀನಾಮೆ ಅಂಗೀಕಾರವಾಗಲಿದ್ದು, ಬಳಿಕ ಏಳು ಸಚಿವ ಸ್ಥಾನ ಖಾಲಿ ಉಳಿದಂತಾಗಲಿದೆ.
ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಮಾಜಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಜತೆಗೆ ಉಪಚುನಾವಣೆಯಲ್ಲಿ ಗೆದ್ದರೆ ಮುನಿರತ್ನ ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ. ಈ ಮೂರು ಮಂದಿಗೆ ಸಚಿವ ಸ್ಥಾನ ದೊರೆತರೆ ನಾಲ್ಕು ಸ್ಥಾನ ಖಾಲಿ ಉಳಿಯಲಿದೆ. ಮಸ್ಕಿ ಕ್ಷೇತ್ರಕ್ಕೆ ಸದ್ಯದಲ್ಲೇ ಉಪಚುನಾವಣೆ ಘೋಷಣೆಯಾಗಲಿದ್ದು, ಪ್ರತಾಪಗೌಡ ಪಾಟೀಲ್ ಅವರಿಗೂ ಒಂದು ಸಚಿವ ಸ್ಥಾನ ಕಾಯ್ದಿರಿಸಬೇಕಾಗಬಹುದು.
ಇದನ್ನೂ ಓದಿ:ಅಶೋಕ್ ಚಕ್ರಧಾರಿ ತಯಾರಿಸಿದ ಈ ಮ್ಯಾಜಿಕ್ ಲ್ಯಾಂಪ್ 24 – 60 ಗಂಟೆ ಕಾಲ ಬೆಳಗುತ್ತಂತೆ
ಆ ಹಿನ್ನೆಲೆಯಲ್ಲಿ ಬಾಕಿ ಉಳಿಯುವ ಮೂರು ಸ್ಥಾನಗಳಿಗೆ ತೀವ್ರ ಪೈಪೋಟಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಮೂಲ ಬಿಜೆಪಿಯಿಂದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಜಿ.ಎಚ್.ತಿಪ್ಪಾರೆಡ್ಡಿ ಸೇರಿದಂತೆ ಇತರೆ ಆಕಾಂಕ್ಷಿಗಳಿದ್ದು, ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಕಳೆದ ಬಾರಿ ಸಂಪುಟ ಪುನಾರಚನೆಯ ಇಂಗಿತವನ್ನು ಯಡಿಯೂರಪ್ಪ ಅವರು ವ್ಯಕ್ತಪಡಿಸಿದರೂ ವರಿಷ್ಠರು ಸ್ಪಂದಿಸಿರಲಿಲ್ಲ. ಹಾಗಾಗಿ ಈ ಬಾರಿಯೂ ವರಿಷ್ಠರು ಸಂಪುಟ ವಿಸ್ತರಣೆಗಷ್ಟೇ ಹಸಿರು ನಿಶಾನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.