Advertisement

ಲೋಕಾಯುಕ್ತ ಸಂಸ್ಥೆಯನ್ನು ಬಲವರ್ಧನೆಗೆ ಸಂಪುಟ ನಿರ್ಧಾರ

10:42 PM Sep 14, 2022 | Team Udayavani |

ಬೆಂಗಳೂರು: ಎಸಿಬಿ ರದ್ದುಗೊಳಿಸಿರುವ ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಲು ತೀರ್ಮಾನಿಸಿದ್ದು, ಅಗತ್ಯ ಸೌಲಭ್ಯ ಹಾಗೂ ಸಿಬಂದಿ ಒದಗಿಸಲು ನಿರ್ಧರಿಸಿದೆ.

Advertisement

ಈ ಬಗ್ಗೆ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಲೋಕಾಯುಕ್ತರಿಗೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸಮಾನವಾದ ವೇತನ ಹಾಗೂ ಭತ್ತೆ, ಸೌಲಭ್ಯಗಳನ್ನು ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಜಿಲ್ಲಾ ಕೇಂದ್ರಗಳಲ್ಲಿ ಲೋಕಾಯುಕ್ತ ಕಚೇರಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಅಪರ ನಿಬಂಧಕರು (ವಿಚಾರಣೆಗಳು) ಹುದ್ದೆಯಲ್ಲಿ ಗುತ್ತಿಗೆ ಕಾರ್ಯನಿರ್ವಹಿಸುತ್ತಿರುವ ಲೆಕ್ಕದಪ್ಪ ಜಂಬಗಿ ಇವರ ಸೇವಯನ್ನು ಮಾರ್ಚ್‌ 26ರಿಂದ ಒಂದು ವರ್ಷದ ಅವಧಿಗೆ ಮುಂದುವರಿಸುವುದು ಹಾಗೂ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ ನಾಡಿಗೇರ ಅವರನ್ನು ಖಾಲಿಯಿರುವ ಅವರ ನಿಬಂಧಕರು (ವಿಚಾರಣೆಗಳು) ಹುದ್ದೆಯಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಗೆ
ಉಡುಪಿ ಜಿಲ್ಲೆ , ಬ್ರಹ್ಮಾವರ ತಾಲ್ಲೂಕಿನ ಪಾಂಡೇಶ್ವರ-ಮೂಡಹಡು ಮತ್ತು ಬಾಕೂìರು-ಬೆಣ್ಣೆಕುದ್ರು ಮಧ್ಯದಲ್ಲಿ ಸೀತಾನದಿಗೆ ಅಡ್ಡಲಾಗಿ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ರೂ. 151.00 ಕೋಟಿ ರೂ. ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಲ್ಲದೇ, ಉಡುಪಿ ಬ್ರಾಹ್ಮಾವರ ತಾಲೂಕಿನ ಹಂದಾಡಿ – ಕುಮ್ರಗೋಡಿನಿಂದ ಬಾಕೂìರು ಬೆಣ್ಣೆಕುದ್ರು ಮಧ್ಯದಲ್ಲಿ ಸೀತಾನದಿಗೆ ಅಡ್ಡಲಾಗಿ ಸೇತುವ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ರೂ. 160.25 ಕೋಟಿ ರೂ. ಗಳ ಮೊತ್ತದ ಅಂದಾಜಿಗೆ ಅಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜತೆಗೆ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿಗೆ ಉಪ್ಪು ನೀರಿನಿಂದ ಹಾನಿಯಾಗುವುದನ್ನು ತಡೆಯಬಹುದು ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ.

ಸಚಿವ ಸಂಪುಟದ ಪ್ರಮುಖ ನಿರ್ಣಯಗಳು
– ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಕ್ರಿಯಾ ಯೋಜನೆ- 6ರನ್ವಯ ಅನುಮೋದಿತವಾಗಿರುವ ಕುಡುತಿನಿ ಪಟ್ಟಣದ, ಬಳ್ಳಾರಿ ಬೈಪಾಸ್‌ ರಸ್ತೆಯಿಂದ ಹೊಸಪೇಟೆ ಬೈಪಾಸ್‌ ರಸ್ತೆಯವರೆಗೆ ರಸ್ತೆ ಅಭಿವೃದ್ಧಿಪಡಿಸುವ ರೂ. 28.50 ಕೋಟಿಗಳ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
– ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೈಗೆತ್ತಿಕೊಂಡಿರುವ ಅಪೂರ್ಣಗೊಂಡಿರುವ ಉಗ್ರಾಣಗಳ ಮತ್ತು ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ರೂ.862.37 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
– ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ವಿವಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಒಳಾಂಗಣ ವಿನ್ಯಾಸವನ್ನು 30.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ
– ಹಾವೇರಿ ಜಿಲ್ಲೆ, ಸವಣೂರು ಸರಕಾರಿ ಆಯುರ್ವೇದ ತಾಲೂಕು ಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು 54.00 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಾರಂಭಿಸಲು ಅನುಮತಿ ನೀಡಿ ಆದೇಶಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ
– ಹುಬ್ಬಳ್ಳಿ-ಬಳ್ಳಾರಿ ರೈಲ್ವೆ ಮಾರ್ಗದ ಹೊಸಪೇಟೆ-ಕಾರಿಗನೂರು ರೈಲು ನಿಲ್ದಾಣಗಳ ನಡುವಿನ ಕಿ.ಮೀ. 145/400-500ನಲ್ಲಿ ಬರುವ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಗಳನ್ನು ರೂ. 26.21 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
– ಹುಬ್ಬಳ್ಳಿ-ಲೋಂಡಾ ರೈಲ್ವೆ ವಿಭಾಗದಲ್ಲಿನ ಧಾರವಾಡ-ಕ್ಯಾರಕೊಪ್ಪ ರೈಲ್ವೆ ನಿಲ್ದಾಣಗಳ ನಡುವಿನ ಕಿ.ಮೀ. 491/400-500ನಲ್ಲಿ ಬರುವ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಬದಲಿಗೆ ರಸ್ತೆ ಕೆಳಸೇತುವೆಯನ್ನು ರೂ. 41.59 ಕೋಟಿ ರೂ. ಗಳಿಗೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತಕ್ಕೆ ಅನುಮೋದನೆ
– ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರವನ್ನು ಅದರ ಸಿಬಂದಿ ಹಾಗೂ ಅಸ್ತಿ ಋಣಭಾರಗಳ ಸಮೇತ, ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯಲ್ಲಿ ವಿಲೀನ
– ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಬರುವ ಕೆ.ಆರ್‌. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಪಿ.ಕೆ.ಟಿ.ಬಿ. ಆಸ್ಪತ್ರೆ ಕಟ್ಟಡಗಳ 14 ನವೀಕರಣ ಕಾಮಗಾರಿಗಳನ್ನು ರೂ. 89,00 ಕೋ. ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
– ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ರೂ. 250 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next