ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಕೆಲವು ಹಿರಿಯರನ್ನು ಕೈಬಿಟ್ಟಿರು ವುದು, ಪ್ರಬಲ ಆಕಾಂಕ್ಷಿಗಳಾಗಿದ್ದ ಹಲವರನ್ನು “ಅಚ್ಚರಿ’ಯ ರೀತಿಯಲ್ಲಿ ಹೊರಗಿಟ್ಟಿರುವುದನ್ನು ಬಿಟ್ಟರೆ, ಜಾತೀವಾರು, ಪ್ರಾದೇಶಿಕ ಅಸಮ ತೋಲನ, ಜಿಲ್ಲಾವಾರು ಪ್ರಾತಿನಿಧ್ಯದ ವಿಚಾರ ದಲ್ಲಿ ಹೊಸ ಸಚಿವ ಸಂಪುಟ ಹಿಂದಿನ ಯಡಿಯೂರಪ್ಪನವರ ಸಚಿವ ಸಂಪುಟದ ಪಡಿಯಚ್ಚಿ ನಂತಿದೆ.
ಆದರೆ, ಬಿಎಸ್‌ವೈ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿ ಗಳಿದ್ದರು. ಬೊಮ್ಮಾಯಿ ಸಂಪುಟಕ್ಕೆ ಡಿಸಿಎಂಗಳ “ಹೆಚ್ಚುವರಿ ಭಾರ’ ಇಲ್ಲ. ಬಿಎಸ್‌ವೈ ಸಂಪುಟದಲ್ಲಿ ಮೊದಲ ಹಂತದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಬೊಮ್ಮಾಯಿ ಸಂಪುಟದಲ್ಲಿ ಮೊದಲ ಹಂತದಲ್ಲಿ 29 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಹುತೇಕರು ಬಿಎಸ್‌ವೈ ಸಂಪುಟದಲ್ಲಿದ್ದವರೇ ಮುಂದುವರಿದಿದ್ದು, ಪ್ರತಿಜ್ಞಾ ವಿಧಿಯನ್ನು “ನವೀಕರಣ’ ಮಾಡಿಸಿಕೊಂಡಂತಾಗಿದೆ.
ಶ್ರೀಮಂತ ಪಾಟೀಲ್ ಹೊರತುಪಡಿಸಿ ಎಲ್ಲ ವಲಸಿಗರಿಗೆ ಬೊಮ್ಮಾಯಿ ಸಂಪುಟದಲ್ಲೂ ಸ್ಥಾನ ಸಿಕ್ಕಿದೆ. ಬಿಎಸ್‌ವೈ ಅವಧಿಯಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಪ್ರಕ್ರಿಯೆ ನಾಲ್ಕೈದು ಬಾರಿ ನಡೆದಿತ್ತು. ಆದರೆ, ಬೊಮ್ಮಾಯಿ ಸಂಪುಟದಲ್ಲಿ ಒಂದೇ ಬಾರಿ 29 ಮಂದಿ ಸಚಿವರಾಗಿರುವುದರಿಂದ ಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಗರಿಷ್ಠ ಸಂಖ್ಯೆ 34 ಇದ್ದು, ಹೆಚ್ಚು ವಿಸ್ತರಣೆ, ಪುನಾರಚನೆ ನಡೆಯುವ ಸಾಧ್ಯತೆ ಕಡಿಮೆ ಎನ್ನಬಹುದು. ಬಿಎಸ್‌ವೈ ಸಂಪುಟದಲ್ಲಿ 13 ಮಂದಿ ಮೊದಲ ಬಾರಿಗೆ ಸಚಿವರಾದವರು ಇದ್ದರೆ, ಬೊಮ್ಮಾಯಿ ಸಂಪುಟದಲ್ಲಿ ಆರು ಮಂದಿ ಹೊಸಬರು ಮೊದಲ ಬಾರಿಗೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಎಲ್ಲ ಹಂತಗಳಲ್ಲೂ ಬಿಜೆಪಿ ಹೈಕಮಾಂಡ್ ಬಿಎಸ್‌ವೈಗೆ “ಅಟ್ ಯುವರ್ ಓನ್ ರಿಸ್ಕ್’ ಅಂತ ಹೇಳಿತ್ತು. ಆದರೆ, ಬೊಮ್ಮಾಯಿ ಸರಕಾರ ಅಸ್ತಿತ್ವಕ್ಕೆ ತರುವ ಎಲ್ಲ ಹಂತಗಳನ್ನು ಹೈಕಮಾಂಡ್ ನಿಭಾಯಿಸಿದೆ. ಸದ್ಯ ಪರಿಸ್ಥಿತಿ ಯನ್ನು ಹೈಕಮಾಂಡ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಬೊಮ್ಮಾಯಿ ಅವರಿಗೆ ನಿರಾಳತೆ ಇದೆ. ಮೇಲಾಗಿ, ಬಂಡಾಯ ಮತ್ತು ಅಪಸ್ವರಗಳನ್ನು ನಿಭಾಯಿಸಲು ಬೊಮ್ಮಾಯಿ ಬೆನ್ನಿಗೆ ಬಿಎಸ್‌ವೈ ಇದ್ದಾರೆ. ಆದರೆ, ಬಿಜೆಪಿ
ಸರಕಾರ ಅಸ್ತಿತ್ವಕೆ ತರುವಾಗ ಎಲ್ಲವನ್ನೂ ಬಿಎಸ್‌ವೈ ಏಕಾಂಗಿಯಾಗಿ ನಿಭಾಯಿಸಬೇಕಾಗಿತ್ತು.
ಹಿರಿಯ-ಕಿರಿಯರ ಸಮಾಗಮ ಸಂಪುಟ :
ಬೆಂಗಳೂರು: ಬೊಮ್ಮಾಯಿ ನೇತೃತ್ವದ ಸಂಪುಟ ದಲ್ಲಿ ಅತೀ ಹಿರಿಯರು ಎಂದರೆ ಕೆ.ಎಸ್. ಈಶ್ವರಪ್ಪ, ಅನಂತರ ಗೋವಿಂದ ಕಾರಜೋಳ, ಎಂ.ಟಿ.ಬಿ. ನಾಗರಾಜ್. ಕಿರಿಯರು ಎಂದರೆ ಸುನಿಲ್‌ಕುಮಾರ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ. ಕೆ.ಎಸ್. ಈಶ್ವರಪ್ಪ ಅವರಿಗೆ 73, ಗೋವಿಂದ ಕಾರಜೋಳ ಹಾಗೂ ಎಂ.ಟಿ.ಬಿ. ನಾಗರಾಜ್ ಅವರಿಗೆ 70 ವರ್ಷ.
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 61 ವರ್ಷ. ಉಳಿದಂತೆ, ಆರ್.ಅಶೋಕ್, ಎಸ್.ಟಿ. ಸೋಮಶೇಖರ್, ಬಿ.ಸಿ.ಪಾಟೀಲ್, ಬೈರತಿ ಬಸವ ರಾಜ್, ಆರಗ ಜ್ಞಾನೇಂದ್ರ, ಹಾಲಪ್ಪ ಆಚಾರ್, ಜೆ.ಸಿ. ಮಾಧುಸ್ವಾಮಿ, ಶಿವರಾಮ್ ಹೆಬ್ಟಾರ, ವಿ.ಸೋಮಣ್ಣ, ಉಮೇಶ್ ಕತ್ತಿ 60ರ ಆಸುಪಾಸು. ಡಾ| ಸಿ.ಎನ್. ಅಶ್ವತ್ಥನಾರಾಯಣ, ಮುನಿರತ್ನ, ಗೋಪಾಲಯ್ಯ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಬಿ.ಸಿ.ನಾಗೇಶ್, ಸಿ.ಸಿ. ಪಾಟೀಲ್, ನಾರಾಯಣಗೌಡ, ಪ್ರಭು ಚೌವ್ಹಾಣ್, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು, ಅಂಗಾರ 50 ಪ್ಲಸ್. ಡಾ| ಕೆ.ಸುಧಾಕರ್, ಸುನಿಲ್‌ಕುಮಾರ್, ಆನಂದ್ ಸಿಂಗ್, ಶಂಕರ ಪಾಟೀಲ್ ಮುನೇನಕೊಪ್ಪ 45 ಪ್ಲಸ್.