ಬೆಂಗಳೂರು: ನಿಷೇಧದ ನಡುವೆಯೂ ಶೇರಿಂಗ್, ಪೂಲಿಂಗ್ ಸೇವೆ ನೀಡಿದ ಕ್ಯಾಬ್ ಸಂಸ್ಥೆಗಳ ವಿರುದ್ಧ ಶುಕ್ರವಾರ ನಗರದ ವಿವಿಧೆಡೆ ಕಾರ್ಯಾಚರಣೆಗಿಳಿದ ಸಾರಿಗೆ ಇಲಾಖೆ ಅಧಿಕಾರಿಗಳು, ಕೋರಮಂಗಲ ಸುತ್ತಮುತ್ತ ಸುಮಾರು 30 ಕ್ಯಾಬ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಮಾಡಿ ಓಲಾ ಮತ್ತು ಉಬರ್ ಕಂಪೆನಿಗಳಿಗೆ ಸೇರಿದ ಸುಮಾರು 30 ವಾಹನಗಳನ್ನು ವಶಕ್ಕೆ ಪಡೆದರು. ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗೆ ಮಣಿದ ಓಲಾ-ಉಬರ್ ಕಂಪೆನಿಗಳು, ಸಮಸ್ಯೆ ಬಗೆಹರಿಸಲು ಹದಿನೈದು ದಿನಗಳ ಕಾಲಾವಕಾಶ ಕೋರಿಕೆ ಸಲ್ಲಿಸಿದವು. ಈ ಹಿನ್ನೆಲೆಯಲ್ಲಿ ಜಪ್ತಿ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.
“ಶೇರ್ ಕ್ಯಾಬ್’ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಕ್ಯಾಬ್ ಕಂಪನಿಳಿಗೆ ಶುಕ್ರವಾರದ ವರೆಗೆ ಗಡುವು ನೀಡಿತ್ತು. ಆದರೆ, ಶೇರ್ ಕ್ಯಾಬ್ ಕಾನೂನು ಬದ್ಧವಾಗಿದ್ದು, ಸ್ಥಗಿತಗೊಳಿಸುವ ಅಗತ್ಯವೇ ಇಲ್ಲ ಎಂದು ಆ್ಯಪ್ ಆಧಾರಿತ ಕ್ಯಾಬ್ ಕಂಪೆನಿಗಳು ಸಮರ್ಥಿಸಿಕೊಂಡಿದ್ದವು. ಮೋಟಾರು ವಾಹನ ಕಾಯ್ದೆ ಪ್ರಕಾರ ಚಾಲಕ ಒಂದೇ ಕಾಂಟ್ರ್ಯಾಕ್ಟ್‌ನಡಿ ಹಲವು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಅವಕಾಶವಿದೆ. ಪೂಲಿಂಗ್ ವ್ಯವಸ್ಥೆಯೂ ಇದೇ ಮಾದರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಇದು ರಹದಾರಿಯ ಉಲ್ಲಂಘನೆಯಾಗುವುದಿಲ್ಲ ಎಂದು ಕ್ಯಾಬ್ ಕಂಪನಿಗಳು ಹೇಳಿದ್ದವು.
ನಗರದಲ್ಲಿ ಸುಮಾರು 50 ಸಾವಿರ ಆ್ಯಪ್ ಆಧಾರಿತ ವಾಹನಗಳು ಸೇವೆ ನೀಡುತ್ತಿವೆ, ಇದರಲ್ಲಿ ಶೇ. 40ರಷ್ಟು ವಾಹನಗಳು “ಕ್ಯಾಬ್ ಶೇರ್’ ಸೇವೆ ನೀಡುತ್ತಿವೆ.”ಶೇರ್ ಕ್ಯಾಬ್’ ಸೇವೆ ನಿಯಮಬಾಹಿರವಾಗಿದ್ದು, ಅಂತಹ ಸೇವೆ ನೀಡುವ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈಗ ಪುನಃ 15 ದಿನಗಳ ಕಾಲಾವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಜಪ್ತಿ ಕಾರ್ಯ ನಿಲ್ಲಿಸಲಾಗಿದೆ.
-ಎಂ.ಕೆ. ಅಯ್ಯಪ್ಪ, ಸಾರಿಗೆ ಆಯುಕ್ತ