ಬೆಂಗಳೂರು: ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಾಳಲಾರದೆ ಕ್ಯಾಬ್ ಚಾಲಕನೊಬ್ಬ ಸೆಲ್ಫಿ ವಿಡಿಯೋದಲ್ಲಿ ಬ್ಯಾಂಕ್‌ನ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆನ್ನಿಗಾನಹಳ್ಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಅನಿಲ್ ಕುಮಾರ್ (32) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ಚಾಲಕ ತನ್ನ ನೋವು ಹೇಳಿಕೊಂಡಿದ್ದಾನೆ. ನಂತರ ಬ್ಯಾಂಕ್ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಜತೆಗೆ, “ಯಾವುದೇ ಕಾರಣಕ್ಕೂ ಬ್ಯಾಂಕ್‌ನಲ್ಲಿ ಮಾತ್ರ ಸಾಲ ಮಾಡಬೇಡಿ. ಅವರು ನೀಡುವ ಕಿರುಕುಳ ತಾಳಲು ಸಾಧ್ಯವಿಲ್ಲ,’ ಎಂದು ಹೇಳುತ್ತಾ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ಬೈಯಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಮೃತ ಅನಿಲ್, ತನ್ನ ತಂದೆ ರಾಜೇಂದ್ರ ಅವರ ಹೆಸರಿನಲ್ಲಿ 2009ರಲ್ಲಿ ಬೈಯ್ಯಪ್ಪನಹಳ್ಳಿಯ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಪ್ರಸ್ತುತ ಎಸ್‌ಬಿಐಗೆ ವಿಲೀನವಾಗಿದೆ) ಶಾಖೆಯಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದು, ಮಾಸಿಕ 5 ಸಾವಿರ ರೂ. ಇಎಂಐ ಪಾವತಿಸುತ್ತಿದ್ದರು. ಕಳೆದೊಂದು ವರ್ಷದಿಂದ ಕಂತು ಪಾವತಿಸದ ಕಾರಣ ಬ್ಯಾಂಕ್ ಸಿಬ್ಬಂದಿ ಅನಿಲ್‌ಗೆ ನೋಟಿಸ್ ನೀಡಿದ್ದರು.
ಈ ಬಗ್ಗೆ ನಿರಂತರವಾಗಿ ಕರೆ ಮಾಡಿ ಕಂತಿನ ಹಣ ಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ಅನಿಲ್ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಅನಿಲ್ ಮನೆಗೆ ತೆರಳಿ ಹಣ ಪಾವತಿಸದಿದ್ದರೆ ಮನೆ ಹರಾಜು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮನೆಗೆ ಬಂದ ಅನಿಲ್ ಸೆಲ್ಫಿ ವಿಡಿಯೋ ಮಾಡಿಕೊಂಡು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಸುದ್ದಿ ತಿಳಿದ ಮನೆಯವರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅನಿಲ್ ಮೃತಪಟ್ಟಿದ್ದಾನೆ.
“ಸಾಲ ಮರುಪಾವತಿ ವಿಚಾರವಾಗಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಕಿರುಕುಳ ನೀಡಿದ್ದರು. ಸರಿಯಾದ ಸಮಯಕ್ಕೆ ಕಂತು ಪಾವತಿಸಿದ್ದರೂ ವಿನಾಕಾರಣ ಅಧಿಕಾರಿಗಳು ಮನೆಗೆ ಬಂದು, ಸಾರ್ವಜನಿಕವಾಗಿ ಅನಿಲ್‌ನನ್ನು ನಿಂದಿಸಿ, ಬೆದರಿಸಿದ್ದರು’ ಎಂದು ಅನಿಲ್ ಕುಟುಂಬ ಆರೋಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.