ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಜಾಮಿಯಾ ವಿವಿಯ ಹೊರಗೆ ರವಿವಾರ ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇದು ದಿಲ್ಲಿಯಲ್ಲಿ 4 ದಿನಗಳ ಅವಧಿಯಲ್ಲಿ ನಡೆದ 3ನೇ ಶೂಟೌಟ್ ಪ್ರಕರಣವಾಗಿದೆ.
ಘಟನೆ ಖಂಡಿಸಿ ಜಾಮಿಯಾ ವಿದ್ಯಾರ್ಥಿಗಳು ಸೋಮವಾರ ಭಾರೀ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪಿಎಫ್ಐ ಸದಸ್ಯರ ಸೆರೆ: ಉತ್ತರಪ್ರದೇಶದಲ್ಲಿ ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ 4 ದಿನಗಳ ಅವಧಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 108 ಸದಸ್ಯರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ 25 ಮಂದಿ ಸದಸ್ಯರನ್ನು ಸೆರೆಹಿಡಿಯಲಾಗಿತ್ತು.
ಕೇರಳ ಸಿಎಂ ಎಚ್ಚರಿಕೆ: ಪೌರತ್ವ ವಿರೋಧಿ ಪ್ರತಿಭಟನೆಗಳಲ್ಲಿ ಎಸ್‌ಡಿಪಿಐನಂತಹ ತೀವ್ರಗಾಮಿ ಗುಂಪುಗಳು ನುಸುಳುತ್ತಿದ್ದು ನಮ್ಮ ಗಮನಕ್ಕೆ ಬಂದಿದೆ. ಸಾಮರಸ್ಯ ಕೆಡಿಸುವಂಥ ಯಾವುದೇ ಪ್ರಯತ್ನವನ್ನೂ ಸಫಲವಾಗಲು ಬಿಡುವುದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ನಡುವೆ, ದೇಶದ್ರೋಹ ಆರೋಪದಲ್ಲಿ ಬಂಧಿತನಾಗಿರುವ ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್‌ನನ್ನು ಮತ್ತೆ 3 ದಿನ ಪೊಲೀಸ್ ವಶಕ್ಕೊಪ್ಪಿಸಿ ದಿಲ್ಲಿ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಮಗು ಅಸುನೀಗಿದರೂ ಪ್ರತಿಭಟನೆಗೆ ಮರಳಿದ ತಾಯಿ!
ಶಹೀನ್‌ಬಾಘ… ಪ್ರತಿಭಟನಾ ಸ್ಥಳದಲ್ಲಿ ಎಲ್ಲರ ಮನೆಮಾತಾಗಿದ್ದ ನಾಲ್ಕು ತಿಂಗಳ ಕೂಸು ವಿಪರೀತ ಚಳಿಯಿಂದಾಗಿ ಅಸುನೀಗಿದೆ. ಪ್ರತಿ ದಿನ ತಾಯಿಯೊಂದಿಗೆ ಪ್ರತಿಭಟನೆಗೆ ಬರುತ್ತಿದ್ದ ಮೊಹಮ್ಮದ್ ಜಹಾನ್‌ಗೆ ಭಾರೀ ಚಳಿಯಿಂದಾಗಿ ಶೀತ ಹಾಗೂ ರಕ್ತಸಂಚಯ ಉಂಟಾಗಿತ್ತು. ಜ.31ರಂದು ರಾತ್ರಿ ಮನೆಗೆ ಮರಳಿದ್ದ ತಾಯಿ ನಾಜಿಯಾ, ಮಗುವನ್ನು ಮಲಗಿಸಿ ನಿದ್ದೆಗೆ ಜಾರಿದ್ದರು. ಬೆಳಗ್ಗೆ ಏಳುವಷ್ಟರಲ್ಲಿ ಜಹಾನ್ ಕೊನೆಯುಸಿರೆಳೆದಿದ್ದ. ಆದರೂ, ನಾಜಿಯಾ ಮಾತ್ರ ಮತ್ತೆ ಪ್ರತಿಭಟನೆಗೆ ಮರಳಿದ್ದು, ನನ್ನ ಮಕ್ಕಳ ಭವಿಷ್ಯಕ್ಕಾಗಿ ನಾನು ಪ್ರತಿಭಟಿಸಲೇಬೇಕಾಗಿದೆ ಎಂದಿದ್ದಾರೆ.