Advertisement

ಭಾರತಕ್ಕೆ ಸಿಎಎ, ಎನ್‌ಆರ್‌ಸಿ ಅನಿವಾರ್ಯ

09:13 PM Jan 10, 2020 | Lakshmi GovindaRaj |

ಮೈಸೂರು: ಸರ್ಕಾರ ಏನೇ ಮಾಡಿದರೂ ಅದನ್ನು ವಿರೋಧಿಸುವುದೇ ಪ್ರತಿಕ್ಷಗಳ ಕೆಲಸ ಎಂದು ಭಾವಿಸಿರುವ ವಿರೋಧ ಪಕ್ಷಗಳು ಸಿಎಎ ಹಾಗೂ ಎನ್‌ಆರ್‌ಸಿ ವಿಷಯದಲ್ಲಿ ಸುಳ್ಳು ಹೇಳು ಹೇಳುತ್ತಿವೆ ಎಂದು ಸಾಹಿತಿ ಎಸ್‌.ಎಲ್‌. ಭೈರಪ್ಪ ಹೇಳಿದರು. ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಒಬ್ಬ ಸನ್ಯಾಸಿ. ಮೋದಿ ತನ್ನ ಸ್ವಂತಕ್ಕೆ ಏನುಮಾಡೊಲ್ಲ. ಮೋದಿಯನ್ನು ಟೀಕೆ ಮಾಡುವುದೇ ಕಾಂಗ್ರೆಸ್‌ನ ಕೆಲಸವಾಗಿದೆ ಎಂದು ನಗರದ ಕುವೆಂಪುನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Advertisement

ಕಾಂಗ್ರೆಸ್‌ ವಿರುದ್ಧ ಟೀಕೆ: ನಾನು ಸುದ್ದಿ ಆಗಲು ಇಷ್ಟ ಪಡುವುದಿಲ್ಲ. ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಯಾವ ತಂತ್ರ ಮಾಡಿದ್ದರೋ, ಅದೇ ತಂತ್ರವನ್ನು ಸ್ವಾತಂತ್ರ್ಯ ನಂತರ ನೆಹರು ಅನುಸರಿಸಿದರು. ಹಿಂದೂ ಸಮಾಜದ ಒಗ್ಗಟ್ಟನ್ನು ಕಂಡು, ಜಾತಿಗಳಾಗಿ ಒಡೆದು ಹಾಕಿದರು. ಹಿಂದೂಗಳಿಗೆ ಬ್ರೂಟ್‌ ಮೇಜಾರಿಟಿ ಇದೆ. ನಿಮ್ಮನ್ನು ತುಳಿದುಬಿಡ್ತಾರೆ ಎಂದು ಮುಸಲ್ಮಾನರಲ್ಲಿ ಆತಂಕ ಹುಟ್ಟಿಸಿದರು. ಬಳಿಕ ಮುಸ್ಲಿಂ ಸಮುದಾಯದರನ್ನು ವೋಟ್‌ ಬ್ಯಾಂಕಾಗಿ ಸೃಷ್ಟಿಮಾಡಿಕೊಂಡರು. ಇದೇ ಕಾಂಗ್ರೆಸ್‌ ಪಕ್ಷದ ಐಡಿಯಾಲಜಿ. ಇಂದಿಗೂ ಆ ಪಕ್ಷ ಅದೇ ಐಡಿಯಾಲಜಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.

ಟೀಕೆ ಮಾಡುವುದೇ ಕಾಯಕ: ಮೋದಿ ಸಮರ್ಥ ಹಾಗೂ ಧೈರ್ಯವಂತ ಪ್ರಧಾನಿಯಾಗಿದ್ದಾರೆ. ಆದರೆ ಕಾಂಗ್ರೆಸ್‌ ಸೇರಿದಂತೆ ಉಳಿದ ವಿರೋಧ ಪಕ್ಷಗಳಿಗೆ ಅವರನ್ನು ಟೀಕೆ ಮಾಡುವುದೇ ಕಾಯಕವಾಗಿದೆ. ಮೋದಿಯವರನ್ನು ಕೆಳಗಿಸಿ ಎಂದು ಹೆಳುತ್ತಾರೆ. ಆದರೆ ಅವರ ಸ್ಥಾನಕ್ಕೆ ಬೇರೆ ಪರ್ಯಾಯ ನಾಯಕ ಯಾರು? ಎಂದು ಪ್ರಶ್ನಿಸಿದರು. ಕಾಶ್ಮೀರ ದಲ್ಲಿ 370 ಕಾಯ್ದೆಯನ್ನು ರದ್ದು ಮಾಡಿದರು. ಈ ರೀತಿಯ ಧೈರ್ಯದ ಕೆಲಸ ಮಾಡಿದ್ದಾರೆ. ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ಕಾಂಗ್ರೆಸ್‌ ಗುರಿ. ಹಾಗಾದರೆ ಇವರ ನಂತರ ದೇಶದ ಪ್ರಧಾನಿ ಯಾರು..? ಎಂದು ಮರು ಪ್ರಶ್ನಿಸಿದರು.

ಜೆಎನ್‌ಯು ನಡೆಸಬೇಕಾ ಎಂಬುದರ ಬಗ್ಗೆ ಚಿಂತಿಸಲಿ: ಕೆಲವರು ಜೆಎನ್‌ಯು ವಿದ್ಯಾರ್ಥಿಗಳನ್ನು ತಮ್ಮ ಸ್ವಾರ್ಥಗಾಗಿ ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಗತ್ಯವಿರುವುದನ್ನು ಕೇಳಬೇಕು. ದೇಶದಲ್ಲಿ ಯಾವ ವಿವಿಗೂ ಕೊಡದ ಹಣವನ್ನ ಜೆಎನ್‌ ಯುಗೆ ನೀಡಲಾಗುತ್ತಿದೆ. ಇದೆಲ್ಲ ಜನರ ತೆರಿಗೆ ಹಣ. ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್‌. ಅದಕ್ಕೂ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ. ಬೇರೆ ಯಾವುದೇ ವಿವಿಗೆ ಸಿಗದಷ್ಟು ಹಣ ಜೆಎನ್‌ಯುಗೆ ಸಿಗುತ್ತಿದೆ. ಬೇರೆ ವಿವಿಗಳು ಅದನ್ನೇ ಅನುಕರಣೆ ಮಾಡ್ತಿವೆ. ಎಲ್ಲಾ ವಿವಿಗಳು ನಡೆಯುತ್ತಿರುವುದು ತೆರಿಗೆ ಹಣದಿಂದ. ವಿದ್ಯಾರ್ಥಿಗಳು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಧ್ಯಯನಕ್ಕೆ ಕೊರತೆ ಇರುವುದನ್ನು ಪೂರೈಸಿ ಅಂತಾ ಕೇಳಬೇಕು. ಅದನ್ನು ಬಿಟ್ಟು ರಾಜಕೀಯ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡುವುದು ತರವಲ್ಲ ಎಂದರು.

ಸರ್ಕಾರ ಚಿಂತಿಸಬೇಕು: ನಾನೂ ಕೂಡ ಉಪಾಧ್ಯಾಯನಾಗಿ ನಿವೃತ್ತಿ ಪಡೆದಿದ್ದೇನೆ. ನಾನು ಚಿಕ್ಕಂದಿನಿಂದ ಬಹಳ ಕಷ್ಟಪಟ್ಟು ಓದಿದ್ದಕ್ಕೆ ಈವತ್ತು ಲೇಖಕನಾಗಲು ಸಾಧ್ಯವಾಯ್ತು. ವಿದ್ಯಾರ್ಥಿಗಳ ಹೋರಾಟ ಎಂದಿಗೂ ಶೈಕ್ಷಣಿಕ ಅಗತ್ಯತೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ ಕೆಲವರು ವಿದ್ಯಾರ್ಥಿಗಳನ್ನು ಅಡ್ಡ ದಾರಿಗೆ ಎಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೆಎನ್‌ಯುವನ್ನು ಮುಂದುವರೆಸ ಬೇಕಾ ಎಂಬ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಒಡೆದು ಆಳುವ ನೀತಿ ಎಲ್ಲಾ ಪಕ್ಷಗಳು ಅನುಸರಿಸುತ್ತಿವೆ: ಒಡೆದು ಆಳುವ ನೀತಿ ಕಾಂಗ್ರೆಸ್‌ಗೆ ಸೀಮಿತವಲ್ಲ. ಎಲ್ಲಾ ಪಕ್ಷಗಳು ಇಂದು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ಎಲ್ಲಾ ಪಕ್ಷಗಳು ಒಟ್ಟಿಗೆ ಸೇರಿ ತಮ್ಮ ನೀತಿ ಬದಲಿಸಿಕೊಳ್ಳಬೇಕಾಗಿದೆ. ಜೊತೆಗೆ ಮತದಾನ ಶುದ್ಧವಾಗಬೇಕು ಎಂದರು. ಸ್ವಾತಂತ್ರ ಬಂದ ಬಳಿಕ ಫ‌ಕ್ರುದ್ದೀನ್‌ ಆಲಿ ಪಶ್ಚಿಮ ಬಂಗಾಳದ ಮೂಲಕ ಲಕ್ಷಾಂತರ ಬಾಂಗ್ಲಾ ವಲಸಿಗರನ್ನು ತುಂಬಿದರು. ಇದರಿಂದ ಸ್ಥಳೀಯರು ಅಸ್ಸಾಂನಲ್ಲಿ ದೊಡ್ಡ ಚಳವಳಿ ಮಾಡಿದರು. ಅದಕ್ಕಾಗಿಯೇ ತಮಗೆ ವಿಧೇಯರಾಗಿರಲು ಇಂದಿರಾಗಾಂಧಿ ರಾಷ್ಟ್ರಪತಿ ಹುದ್ದೆ ಕೊಟ್ಟರು ಎಂದು ವಿವರಿಸಿದರು.

ಮೋದಿ ಬುದ್ಧಿವಂತರು: ಕನ್ನಡ ಭಾಷಾ ಮಾಧ್ಯಮ ಕುರಿತು ಚರ್ಚಿಸಲು ನಾನು ಮತ್ತು ಕಂಬಾರರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದೆ. ನಾನು ಎಷ್ಟು ಸಿದ್ಧನಾಗಿದ್ದೆನೋ ಅದಕ್ಕಿಂತ ಹೆಚ್ಚು ಮಾಹಿತಿ ಅವರಲ್ಲಿತ್ತು. ಅವರು ನಿಜಕ್ಕೂ ಬುದ್ಧಿವಂತರು. ವಿಶ್ವದ ಅನೇಕ ದೇಶಗಳಲ್ಲಿ ಮುಸ್ಲಿಮರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಇದೆ. ಭಾರತದಲ್ಲೂ ಇದೆ ಆಗಬೇಕು ಅಂದ್ರೆ ಹೇಗೆ.? ಮೊದಿ ಮುಸ್ಲಿಂ ರಾಷ್ಟ್ರಗಳ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿದ್ದಾರೆ.

ಮೋದಿ ಚೋರ್‌ ಎಂದು ವಿದೇಶಗಳಲ್ಲಿ ಪ್ರಚಾರ ಮಾಡಿದರೆ ಹೇಗೆ.? ಅಮೆರಿಕ ಸೇರಿ ಎಲ್ಲಾ ದೇಶಗಳಲ್ಲಿ ಮೆರಿಟ್‌ ಇದ್ದವರಿಗೆ ಆದ್ಯತೆ ಕೊಟ್ಟಿದ್ದರಿಂದ ಹೆಚ್ಚು ಭಾರತೀಯರಿದ್ದಾರೆ.? 23 ವರ್ಷ ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರಿಗೆ ಆಸ್ಪದ ನೀಡಿದ್ದರಿಂದ ಸಿಎಎ ಹಾಗೂ ಎನ್‌ಆರ್‌ಸಿ ಇಂದು ಅನಿವಾರ್ಯವಾಗಿದೆ. ಈ ಎರಡೂ ಕಾನೂನುಗಳು ಈಗ ಅಲ್ಲದಿದ್ದರೆ ಮತ್ತೆ ಯಾವಾಗ ಮಾಡಬೇಕು. ಇಷ್ಟು ದಿನ ಆಗದಿರುವುದು ಮುಂದೆ ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಎನ್‌ಆರ್‌ಸಿ ಮತ್ತು ಸಿಎಎ ದೇಶಕ್ಕೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

ಸಾಹಿತಿಗಳಿಗೆ ಯಾವುದೇ ಅಜೆಂಡಾ ಇರಬಾರದು. ಸಾಹಿತಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು. ನಾನು ಇಂತಹ ಯಾವುದೇ ಗುಂಪಿಗೆ ಸೇರಿದವನಲ್ಲ.
-ಡಾ.ಎಸ್‌.ಎಲ್‌ ಭೈರಪ್ಪ

ನಮ್ಮ ಸಾಹಿತ್ಯಲೋಕ ಅಸಂಬದ್ಧ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಇದು ದೇಶದ ಹಿತಕ್ಕೆ ಸಂಬಂಧಿಸಿದ್ದು ಎಂದು ಅವರು ಸಮರ್ಥನೆ ಮಾಡಲಿ. ಯಾವುದೇ ದೋಷವಿದ್ದರೆ ಅದನ್ನು ಹೇಳಲಿ. ಇದರ ಹೊರತಾಗಿ ಕೆಲವು ಸಂದರ್ಭದಲ್ಲಿ ಮೌನವಾಗಿದ್ದು, ಅನಗತ್ಯ ಸಂದರ್ಭದಲ್ಲಿ ದನಿ ಎತ್ತುವುದು ಸರಿಯಲ್ಲ. ಸಾಹಿತಿಗಳಲ್ಲಿ ನಿಜವಾದ ದೇಶಪ್ರೇಮ, ತತ್ವಗಳಿಲ್ಲ. ಅವರು ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡಿ ತಮ್ಮ ಲಾಭದ ದೃಷ್ಟಿಯಿಂದ ಕೆಲಸ ಮಾಡುತ್ತಾರೆ.
-ಡಾ. ಪ್ರಧಾನ್‌ ಗುರುದತ್ತ, ನಿವೃತ್ತ ಕನ್ನಡ ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next