ಚಿಕ್ಕಮಗಳೂರು: ತಾಯಿ ‘ಇವರೇ ನಿಮ್ಮ ತಂದೆ’ ಎಂದರೆ ನಂಬುತ್ತಾರೆ ಸಾಕ್ಷಿ ಕೇಳುವುದಿಲ್ಲ. ಆದರೆ ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನೂ ಇರುತ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು.
ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, “ಹನುಮ ಹುಟ್ಟಿದ್ದು ಗೊತ್ತಾ” ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ದರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು. ಜಗತ್ತು ನಂಬಿಕೆಗಳ ಮೇಲೆ ಇರುವುದು. ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ಆದರೆ ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತವ ಕಾಣುವುದಿಲ್ಲ ಎಂದರು.
ಇದನ್ನೂ ಓದಿ:ರಾಮಮಂದಿರಕ್ಕಾಗಿ ಪ್ರಧಾನಿ ಮೋದಿ ಕೇಶ ಬಿಟ್ಟಿರಬಹುದು: ಪೇಜಾವರ ಶ್ರೀ ಅಭಿಮತ
ಸಿದ್ದರಾಮಯ್ಯನವರ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ ಸಹವಾಸ ದೋಷದಿಂದ ಬಂದಿರುವುದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವು ಕಾರಣಕ್ಕೆ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಭಿಕ್ಷಾಟನೆ: ದತ್ತಮಾಲಾಧಾರಿಯಾಗಿರುವ ಸಿ.ಟಿ.ರವಿ ಇಂದು ಭಿಕ್ಷಾಟನೆ ನಡೆಸಿದರು. ನಾಳೆ ದತ್ತಜಯಂತಿ ಇರುವ ಹಿನ್ನೆಲೆಯಲ್ಲಿ ನಗರದ ನಾರಾಯಣಪುರದಲ್ಲಿ ಭಿಕ್ಷಾಟನೆ ಮಾಡಿದರು.
ಒಂಬತ್ತು ಮನೆಯಲ್ಲಿ ಸಿ.ಟಿ.ರವಿ ಭಿಕ್ಷಾಟನೆ ನಡೆಸಿದ್ದು, ಇಂದಿನ ಪಡಿಯನ್ನು ಇರುಮುಡಿ ಹೊತ್ತು ನಾಳೆ ದತ್ತಪೀಠದಲ್ಲಿ ಪೂಜೆ ನಡೆಸಲಿದ್ದಾರೆ.