ಬೆಳಗಾವಿ: ಪೌರತ್ವ ಕಾಯಿದೆ ಜಾರಿಯಿಂದ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರತ್ವ ಕಾಯಿದೆ ಜಾರಿಯಿಂದ ಮುಸಲ್ಮಾನರೂ ಸೇರಿದಂತೆ 130 ಕೋಟಿ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದ ನಿರಾಶ್ರಿತರಿಗೆ ಆಶ್ರಯ ನೀಡುವುದು ಕಾಯ್ದೆಯ ಉದ್ದೇಶವಾಗಿದೆ. ಕಾಯ್ದೆ ಸಂವಿಧಾನ ಬಾಹಿರ ಆಗಿದ್ದರೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಿ. ಕಾಯ್ದೆ ವಿರುದ್ದ ವದಂತಿಗಳನ್ನು ಪಸರಿಸಿ ಶಾಂತಿ-ಸುವ್ಯವಸ್ಥೆಗೆ ಭಂಗ ತರಲು ಕೆಲವರು ಪಿತೂರಿ ನಡೆಸಿದ್ದಾರೆ ಎಂದರು.
ಚಳವಳಿ ನೆಪದಲ್ಲಿ ಹಿಂಸಾಚಾರ ನಡೆಸಲಾಗುತ್ತಿದ್ದು, ಕೋಮು ಭಾವನೆ ಕೆರಳಿಸುವ ಕೆಲಸ ಮಾಡಲಾಗುತ್ತಿದೆ. ಸಂಚಿಗೆ ಬಲಿಯಾಗಿ ಹಿಂಸಾಚಾರಕ್ಕೆ ಇಳಿದವರು ಇದನ್ನು ಅರಿತುಕೊಳ್ಳಬೇಕು. ಹಿಂಸಾಚಾರವನ್ನು ಪ್ರಜಾಪ್ರಭುತ್ವ ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಪ್ರಚೋದಿಸುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಳಸಾ-ಬಂಡೂರಿ ವಿಷಯ ಪ್ರಸ್ತಾಪಿಸಿದ ಅವರು ಯೋಜನೆಗೆ ಕೊಟ್ಟಿದ್ದ ಅನುಮತಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಆದ್ದರಿಂದ ಕೇಂದ್ರಕ್ಕೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮನವರಿಕೆ ಮಾಡಿಕೊಟ್ಟು ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.