ಚಿಕ್ಕಮಗಳೂರು: ಸಿಎಂ ಎಂದು ಬೋರ್ಡ್- ಫ್ಲೆಕ್ಸ್ ಹಾಕಿಕೊಂಡ ತಕ್ಷಣ ಸಿಎಂ ಆಗಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರಿಂದ ಘೋಷಣೆ ಕೂಗಿಸಿದರೆ ಸಿಎಂ ಆಗಲ್ಲ. ಕೊಟ್ಟಿದ್ದನ್ನೇ ಉಳಿಸಿಕೊಳ್ಳಲಾಗಿಲ್ಲ, ಇನ್ನು ಗಳಿಸುವುದುಂಟಾ. ಸಿದ್ದರಾಮಯ್ಯನ ಶೈಲಿಯಲ್ಲೇ ಹೇಳುವುದಾದರೆ ಅಪ್ಪನ ಆಣೆ ಸಿಎಂ ಆಗಲ್ಲ. ಕಾಂಗ್ರೆಸ್ ಪಕ್ಷದವರು ಸುಮ್ಮನೆ ಹಗಲುಗನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಛತೀಸ್ ಗಢ ಮತ್ತು ರಾಜಸ್ಥಾನದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದರು.
ಸಿ.ಟಿ.ರವಿಗೆ ಮುಸ್ಲಿಂ-ಹಿಂದೂಗಳ ಮೇಲೆ ಪ್ರೀತಿ ಇಲ್ಲ ಎಂಬ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಣ್ಣ, ದೇವೇಗೌಡರು, ಸಿದ್ದರಾಮಯ್ಯರಿಗೆ ನಾನು ಬಕೆಟ್ ಹಿಡಿದಿಲ್ಲ. ನಾನು ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಕಬಡ್ಡಿ ಆಟವಾಡುತ್ತಿರುವ ವೇಳೆ ಹೃದಯಾಘಾತದಿಂದ ಆಟಗಾರ ಸಾವು: ಟ್ರೋಫಿಯೊಂದಿಗೆ ಅಂತ್ಯಸಂಸ್ಕಾರ
ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಎಸ್‍ವೈ ಮನೆಯಲ್ಲಿ ವಾಚ್‍ಮ್ಯಾನ್ ಆಗ್ತೀನಿ ಎಂದು ಹೇಳಿದ್ದ ಜಮೀರ್ ಅಹಮದ್ ಮೊದಲು ಆ ಮಾತನ್ನ ಉಳಿಸಿಕೊಳ್ಳಲಿ. ನನ್ನ ನಿಯತ್ತನ್ನು ನನ್ನ ಕ್ಷೇತ್ರದ ಜನ ನೋಡಿ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಮಂತ್ರಿ ಆಗಿದ್ದ ನಾನು ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ಸಿನಲ್ಲಿ ಸಿಎಂ ಕುರ್ಚಿ ಫೈಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ನಮ್ಮ ಸಾಧನೆ, ಸಿದ್ಧಾಂತ ಮುಂದಿಟ್ಟು ಮತ ಕೇಳುತ್ತೇವೆ. ಒಂದು ಪಕ್ಷ ಅಧಿಕಾರಕ್ಕೆ ಬರಬೇಕಂದರೆ ನೀತಿ, ನೇತೃತ್ವ, ನಿಯತ್ತಿನ ಮೇಲೆ ಜನ ಮತದಾನ ಮಾಡುತ್ತಾರೆ. ನಮಗೆ ನೀತಿ, ನೇತೃತ್ವ, ನಿಯತ್ತು ಇದೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಉಳಿದವರು ಖಾಲಿ ಇಲ್ಲದಿರುವ ಕುರ್ಚಿಗೆ ಕಿತ್ತಾಡುತ್ತಿದ್ದಾರೆ. ಇದ್ದಾಗ ಉಳಿಸಿಕೊಳ್ಳಲು ಆಗಲಿಲ್ಲ, ಈಗ ಟವೆಲ್ ಹಾಕಲು ಕುರ್ಚಿ ಖಾಲಿ ಇಲ್ಲ ಎಂದರು.