ಬೀದರ್: ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ. ಇದು ಪಕ್ಷದ ಆಂತರಿಕ ಸಮೀಕ್ಷೆಯಷ್ಟೇ ಮಾತ್ರವಲ್ಲ, ಜನರ ನಾಡಿ ಮಿಡಿತವೂ ಆಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಭವಿಷ್ಯ ನುಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಒಂದಂಕಿ ಸ್ಥಾನಕ್ಕೆ ನಿಲ್ಲಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಒಂದಕ್ಕಿಗೆ ಇಳಿದಿದೆ ಎಂದು ವ್ಯಂಗ್ಯವಾಡಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದ ನೇತೃತ್ವದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಲ್ಲಿ ನಾಲ್ಕು ತಿಂಗಳು ಸಹ ಸರಿಯಾಗಿ ಅಧಿಕಾರ ನಡೆಸುವ ಸಂಶಯ ಇದೆ. ಕರ್ನಾಟಕದಲ್ಲಿ ಜಾತ್ಯತೀತತೆ ಕಾರಣಕ್ಕೆ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಹೊರಗಿಡುತ್ತೇವೆ ಎಂದವರು (ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ) 14 ತಿಂಗಳಲ್ಲೇ ಕಿತ್ತುಕೊಂಡು ಹೋದರು. ಇನ್ನೂ ಮಹಾರಾಷ್ಟ್ರದಲ್ಲಿ ಹೊಸ ಮೈತ್ರಿ ಸರ್ಕಾರ ಅಧಿಕಾರ ನಡೆಸುವುದು ನನಗೆ ಅನುಮಾನ. ರಾಜಕಾರಣ ಎಂದರೆ ನೂರು ಮೀಟರ್ ಓಟದ ಸ್ಪರ್ಧೆ ಅಲ್ಲ, ಅದು ಮ್ಯಾರಾಥಾನ್ ಇದ್ದಂತೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿವೆ. ಚುನಾವಣೆ ಪೂರ್ವ ಹೊಂದಾಣಿಕೆ ಆಗಿದ್ದು, ಬಿಜೆಪಿಯ ಸಿಎಂ ಅಭ್ಯರ್ಥಿ ದೇವೇಂದ್ರ ಫಡ್ನವೀಸ್ ಹೆಸರಿನಲ್ಲೇ ಚುನಾವಣೆ ನಡೆಸಲಾಗಿದೆ. ಕಾಲ ಬಂದಾಗ ತಮ್ಮ ನಿಷ್ಠೆ ಏನೆಂಬುದು ಗೊತ್ತಾಗುತ್ತದೆ. ಶಿವಸೇನೆಯನ್ನು ಕೈಬಿಡಬಾರದೆಂಬ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಸಿಎಂ ಅಭ್ಯರ್ಥಿ ವಿರುದ್ಧ ಟೀಕಿಸಿದ್ದರೂ ಸಮಧಾನದಿಂದ ಉತ್ತರಿಸಲಾಗಿದೆ ಎಂದು ತಿಳಿಸಿದರು.
‘ನನ್ನ ಮಜೀದ್ ನನಗೆ ಕೊಡಿ’ ಎಂದು ಬಾಬರಿ ಮಸೀದಿ ಕುರಿತಂತೆ ಟ್ವಿಟ್ ಮಾಡಿರುವ ಎಂಐಎಂ ಪಕ್ಷದ ಅಧ್ಯಕ್ಷ ಅಸಾಸೊದ್ದೀನ್ ಓವೈಸಿ ಅವರು, ಬಾಬರ್ ಪರ್ಶಿಯಾದಿಂದ ಬಂದಿದ್ದ ಒಬ್ಬ ಆಕ್ರಮಣಕಾರ. ಓವೈಸಿ ಅವರು ಬಾಬರ್ ಜತೆ ಗುರುತಿಸಿಕೊಳ್ಳವುದಾದರೆ ಪರ್ಶಿಯಾದಲ್ಲೇ ಮಸೀದಿ ಜಾಗ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.