Advertisement

ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್‌ ದ್ವಾರಕಾನಾಥ್‌

08:31 PM Oct 23, 2021 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ 2(ಎ)ಗೆ ಸೇರಿಸಬೇಕೆಂಬ ಬಲಿಷ್ಠ ವೀರಶೈವ ಪಂಚಮಸಾಲಿ ಸಮುದಾಯದ ಒತ್ತಡಕ್ಕೆ ಸರ್ಕಾರ ಮಣಿಯಬಾರದೆಂದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ ಎಸ್ ದ್ವಾರಕನಾಥ್ ಎಚ್ಚರಿಸಿದ್ದಾರೆ.

Advertisement

ಇಂದು ಕುಮಾರ ಕೃಪ ಅತಿಥಿ ಗೃಹ ದಲ್ಲಿ ರಾಜ್ಯದ ಅತಿ ಹಿಂದುಳಿದ ಜನಾಂಗದ ಮಠಾಧೀಶರನ್ನ ಒಳಗೊಂಡ ಸಭೆಯಲ್ಲಿ ಮಾತನಾಡಿದರು. ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’, ಪಂಚಮಸಾಲಿಗಳ ಮೀಸಲು ಹೋರಾಟವನ್ನು ವಿರೋಧಿಸಿ ಅತಿ ಹಿಂದುಳಿದ ವರ್ಗಗಳ ಎಲ್ಲ ಸ್ವಾಮೀಜಿಗಳು ಪ್ರತಿ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದೆ.

“ವೀರಶೈವ ಪಂಚಮಸಾಲಿ ಸಮಾಜದ ಪೀಠಾಧಿಪತಿಗಳು ಈ ಹೋರಾಟದ ಮುಂಚೂಣಿಯಲ್ಲಿರುವುದು ದುರದೃಷ್ಟಕರ. ಇವರ ಹಿಂದೆ ಪ್ರಬಲ ಸಮುದಾಯದ ಉದ್ಯಮಿಗಳು, ರಾಜಕಾರಣಿಗಳು ಬಲಿಷ್ಠ ಸಂಘಟಕರು ಇದ್ದಾರೆ. ಪ್ರವರ್ಗ 1ರಲ್ಲಿರುವ 95 ಹಾಗೂ ಪ್ರವರ್ಗ 2(ಎ)ದಲ್ಲಿರುವ 102 ಸಮುದಾಯಗಳು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ದುರ್ಬಲವಾಗಿವೆ ಎಂಬುದನ್ನು ಮನಗಂಡು ಈ ದಬ್ಬಾಳಿಕೆಗೆ ಮುಂದಾಗಿದ್ದಾರೆ. ಇದಕ್ಕೆ ಸರ್ಕಾರ ಮಣಿದರೆ, ಬಿಸಿ ಮುಟ್ಟಿಸದೇ ಇರುವುದಿಲ್ಲ,” ಎಂದು ದ್ವಾರಕನಾಥ್‌ ಗುಡುಗಿದರು.

“ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಬಲಶಾಲಿಯಾಗಿರುವ ಪಂಚಮಸಾಲಿ ಸಮುದಾಯದಲ್ಲಿ ಭೂಮಾಲೀಕರು, ದೊಡ್ಡಮಟ್ಟದ ಕೃಷಿಕರು, ಮುಂಚೂಣಿ ಕೈಗಾರಿಕೋದ್ಯಮಿಗಳು, ಪ್ರಬಲ ರಾಜಕಾರಣಿಗಳಿದ್ದಾರೆ. ಈ ಸಮುದಾಯದವರನ್ನು ಕುಶಲಕರ್ಮಿ ಹಾಗೂ ಕುಲವೃತ್ತಿಗಳನ್ನು ನಂಬಿ ಬದುಕುತ್ತಿರುವ ಹಿಂದುಳಿದ ಸಮುದಾಯದ ಜತೆ ಸೇರಿಸುವುದು ದೊಡ್ಡ ಅನ್ಯಾಯ,”ಎಂದರು.

ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಸಿ ವೇಣುಗೋಪಾಲ್ ಮಾತನಾಡಿ, “ತಮಗೆ ಎದುರಾಗುತ್ತಿರುವ ಈ ಅಪಾಯವನ್ನು ಮನಗಂಡು ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’ ಈಗಾಗಲೇ ಅನೇಕ ಹೋರಾಟಗಳನ್ನುಹಮ್ಮಿಕೊಂಡು, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲ ವರಿಷ್ಠರಿಗೆ ಅಹವಾಲು ನೀಡಲಾಗಿದೆ. ಜತೆಗೆ, ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಸಮೀಕ್ಷೆಯ ಬಿಡುಗಡೆ ಕುರಿತೂ ಎಲ್ಲ ಪಕ್ಷಗಳ ವರಿಷ್ಠರ ಗಮನ ಸೆಳೆದಿದ್ದೇವೆ. ಈ ವಿಚಾರವಾಗಿ ಉಚ್ಛ ನ್ಯಾಯಾಲಯಕ್ಕೂ ಮೊರೆ ಹೋಗಲಾಗಿದೆ,” ಎಂದು ಅವರು ವಿವರಿಸಿದರು.

Advertisement

“ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಉದ್ದೇಶ ಏನಂದರೆ, ಅವಕಾಶ ವಂಚಿತ ಸಮುದಾಯಗಳನ್ನು ಪ್ರತಿನಿಧಿಸುವುದು. ಬಹಳ ಪ್ರಮುಖವಾಗಿ ಒಂದನೇ ಪ್ರವರ್ಗದಲ್ಲಿರುವ 95 ಜಾತಿಗಳು, ಎರಡನೇ ಪ್ರವರ್ಗದಲ್ಲಿರುವ 102 ಜಾತಿಗಳು ಅತ್ಯಂತ ಅನ್ಯಾಯಕ್ಕೆ ಒಳಗಾಗಿವೆ. ಮೀಸಲು ಕೊಡುವ ಸಂದರ್ಭದಲ್ಲೂ ಈ ಸಮುದಾಯಗಳಿಗೆ ಬಹಳ ಅನ್ಯಾಯವಾಗಿದೆ. ಪಂಚಮಸಾಲಿಗಳ ಬೇಡಿಕೆ ಪರಿಶೀಲಿಸಲು ನೇಮಿಸಿರುವ ನ್ಯಾಯಮೂರ್ತಿ ಸುಭಾಷ್‌ ಅಡಿ ಸಮಿತಿಯು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ. ಪಂಚಮಸಾಲಿಗಳ ಹೋರಾಟ ತಡೆಯದೇ ಇದ್ದರೆ ಅತಿ ಹಿಂದುಳಿದ ಸಮುದಾಯಕ್ಕೆ ಅತ್ಯಂದ ದೊಡ್ಡ ಪೆಟ್ಟು ಬೀಳುತ್ತದೆ. ಇದು ನಮ್ಮ ಅಸ್ತಿತ್ವದ ಪ್ರಶ್ನೆ. ಬಲಿಷ್ಠ ಪಂಚಮಸಾಲಿ ಸಮುದಾಯಗಳ ಒತ್ತಾಯಕ್ಕೆ ಮಣಿದು ಸರ್ಕಾರ ಅವರ ಪರವಾಗಿ ನಿರ್ಣಯಗಳನ್ನು ಕೈಗೊಳ್ಳುವಂಥ ಅಪಾಯ ಇದೆ. ಹಾಗಾಗಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಒಗ್ಗೂಡಿ ಸರ್ಕಾರದ ಮೇಲೆ ಪ್ರತಿ ಒತ್ತಡ ಹೇರಬೇಕು,”ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಾಗೃತ ವೇದಿಕೆಯ ಉಪಾಧ್ಯಕ್ಷ ರಮೇಶ್‌, ಕೆ.ಎಸ್‌ ದುಶ್ಯಂತ್‌, ನರಸಿಂಹಮೂರ್ತಿ, ರಾಜಶೇಖರ ಹೆಚ್‌.ಪಿ, ಎಸ್‌ಆರ್‌. ಯಲ್ಲಪ್ಪ, ಮಂಜುನಾಥ್‌, ಹೆಚ್‌.ಸಿ. ರುದ್ರಪ್ಪ, ಎಂ. ನಾಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next