Advertisement

ಯೋಗೇಶ್ವರ್ ಒಬ್ಬ 420, ಆತನನ್ನು ಸಂಪುಟದಿಂದ ವಜಾ ಮಾಡಿ ಬಂಧಿಸಬೇಕು: ರೇಣುಕಾಚಾರ್ಯ ವಾಗ್ದಾಳಿ

05:59 PM May 27, 2021 | Team Udayavani |

ಹೊನ್ನಾಳಿ: ತನ್ನ ಕ್ಷೇತ್ರದಲ್ಲಿ ಅಸ್ತಿತ್ವ ಕಳೆದುಕೊಂಡು ಈಗ ದೆಹಲಿಗೆ ಓಡಾಡಿದರೆ ಫಲಪ್ರದವಾಗುವುದಿಲ್ಲ. ಸಚಿವ ಸಿ.ಪಿ. ಯೋಗೇಶ್ವರ ಒಬ್ಬ 420,  ಕಳ್ಳನಂತೆ ಕಾರ್ಯ ಮಾಡುತ್ತಿದ್ದಾನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇರವಾಗಿ ಏಕವಚನದಲ್ಲಿ ಯೋಗೇಶ್ವರ ವಿರುದ್ಧ  ಹರಿಹಾಯ್ದರು.

Advertisement

ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಪಿ ಯೋಗೇಶ್ವರ್‌ಗೆ ಲೂಟಿ ಮಾಡುವ ಖಾತೆ ಬೇಕಂತೆ. ಖಾತೆ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಲು ಬಂದರೆ, ನಾವು ಸುಮ್ಮನಿರಲ್ಲ. ಜನರ ರಕ್ಷಣೆ ಮಾಡುವ ಬದಲು ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ. ಇಂಥವರಿಂದಲೇ ಪಕ್ಷಕ್ಕೆ ಧಕ್ಕೆಯಾಗುತ್ತದೆ. ನೇರಾನೇರ ನೀನು ಅಖಾಡಕ್ಕೆ ಬಾ. ನನಗೆ ಹೇಗೆ ಪಟ್ಟು ಹಾಕಬೇಕು ಎಂದು ಗೊತ್ತಿದೆ. ಸಚಿವನಾಗಲು ಕಾಲು ಹಿಡಿದವನು ಈಗ ಅವರ ವಿರುದ್ಧವೇ ಮಾತನಾಡುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಯಡಿಯೂರಪ್ಪನವರು ನಿನಗೆ ಸಚಿವನನ್ನಾಗಿ ಮಾಡಿದ್ದೇ ದೊಡ್ಡ ತಪ್ಪು ಎಂದರು.

ವಜಾ ಮಾಡಿ ಬಂಧಿಸಬೇಕು: ಬಿಜೆಪಿ ಮೂರು ಭಾಗವಾಗಿದೆ ಎಂದು ಹೇಳಲು, ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಹೇಳಲು ಸಿ.ಪಿ. ಯೋಗೇಶ್ವರ್‌ಗೆ ಯಾವ ನೈತಿಕತೆಯೂ ಇಲ್ಲ. ಮೆಗಾಸಿಟಿ ಹಗರಣದಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದ ಅವರು ಮುಖ್ಯಮಂತ್ರಿಯವರು ಕೂಡಲೇ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಬಿಜೆಪಿ ಶುದ್ಧ ಸರ್ಕಾರವಾಗಿ ಉಳಿದಿಲ್ಲ, ಮೂರು ಗುಂಪಿನ ಸರ್ಕಾರವಾಗಿದೆ : ಸಿ.ಪಿ ಯೋಗೇಶ್ವರ್

ಯಾರು ಪಕ್ಷದಲ್ಲಿ ತಲೆ ಹರಟೆ ಮಾಡುತ್ತಾರೋ ಅವರನ್ನು ಉಚ್ಛಾಟಿಸಿ ಎಂದು 65 ಶಾಸಕರು ಸಹಿ ಮಾಡಿದ ಪತ್ರ ನನ್ನ ಬಳಿ ಇದೆ. ಅಗತ್ಯ ಬಿದ್ದಾಗ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ತಲುಪಿಸುತ್ತೇನೆ. ಸಿಪಿ ಯೋಗೇಶ್ವರ್ ಹಿಂಬಾಗಿಲಿನಿಂದ ವಿಧಾನಸೌಧ ಪ್ರವೇಶಿಸಿ ಮಂತ್ರಿಗಿರಿ ಗಿಟ್ಟಸಿಕೊಂಡಿದ್ದಾನೆ. ಈತನಿಗೆ ಬಿಜೆಪಿ ತತ್ವ ಸಿದ್ಧಾಂತ ಯಾವುದು ಬೇಡವಾಗಿ ಪಕ್ಷದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುತ್ತಾರೆ ಎಂದರು.

Advertisement

ಕೊರೊನಾದಿಂದ ಜನರು ನೊಂದು, ಬೆಂದು ಹೋಗಿದ್ದಾರೆ. ಈ ಸಮಯದಲ್ಲಿ ದೆಹಲಿಗೇಕೆ ಹೋಗಬೇಕಿತ್ತು. ಅನಾವಶ್ಯವಾಗಿ ಸಮಸ್ಯೆಗಳನ್ನು ಹುಟ್ಟು ಹಾಕುವುದು ಬೇಕಿತ್ತೇ? ಯೋಗೇಶ್ವರ್ ದೆಹಲಿಯಲ್ಲಿ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಅವರ ಗೇಟು ಮುಟ್ಟಿ ಬಂದು ಪೋಟೋ ತೆಗೆಸಿಕೊಂಡಿದ್ದಾನೆ. ಮನೆ ಗೆದ್ದು ಮಾರು ಗೆಲ್ಲು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ತನ್ನ ಕ್ಷೇತ್ರದಲ್ಲಿ  ಗೆಲ್ಲಲಾಗದ ಸಿಪಿವೈ ದೆಹಲಿಗೆ ಹೋಗುತ್ತಾನೆ. ಈಗಲಾದರೂ ಒಣ ರಾಜಕೀಯ ಬಿಟ್ಟು ಕ್ಷೇತ್ರದಲ್ಲಿ ಸಂಚರಿಸಿ ಕೊರೊನಾ ಜಾಗೃತಿ ಮಾಡಲಿ ಎಂದು ತಾಕೀತು ಮಾಡಿದರು.

ಕೋವಿಡ್ ಮೊದಲ ಹಂತವನ್ನು ಪಿಎಂ ಹಾಗೂ ಸಿಎಂ ಸಮರ್ಥವಾಗಿ ನಿಭಾಯಿಸಿದ್ದು ಎರಡನೇ ಅಲೆ ಆರಂಭವಾಗಿದೆ.  ಮುಖ್ಯಮಂತ್ರಿ ಬಿಎಸ್‌ವೈ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ಕ್ಷೇತ್ರದ ಕಾವಲುಗಾರನಾಗಿ ಕೆಲಸ ಮಾಡ ಬೇಕಿದೆ. ನಮ್ಮ ನಾಯಕರು ಯಾವತ್ತಿದ್ದರೂ ಯಡಿಯೂರಪ್ಪ. ನಾಯಕತ್ವ ಬದಲಾವಣೆ ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಶಾಸಕಾಂಗ ಸಭೆ ಕರೆಯುವ ಅವಶ್ಯಕತೆಯೂ ಇಲ್ಲ  ಎಂದರು.

ಮಂತ್ರಿ ಸ್ಥಾನಕ್ಕಾಗಿ ಕಾಲು ಹಿಡಿದವನು: ಬೇರೆ ಪಕ್ಷದಿಂದ ಬಂದು ಯಡಿಯೂರಪ್ಪನವರ ಆಶೀರ್ವಾದದಿಂದ ಶಾಸಕನಾಗಿದ್ದಾನೆ. ಸದಾನಂದ ಗೌಡರ ಅವಧಿಯಲ್ಲಿ ಅರಣ್ಯ ಸಚಿವರಾಗಿ ಲೂಟಿ ಹೊಡೆದಿದ್ದಾನೆ. ನಂತರ ನಮ್ಮ ಪಕ್ಷ ಬಿಟ್ಟು ಸೈಕಲ್ ಏರಿ ಮತ್ತೆ ಬಿಜೆಪಿ ಸೇರಿದ್ದಾನೆ. ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಪ್ಲಾಟ್‌ನಲ್ಲಿ ವಿಜಯೇಂದ್ರ ಅವರ ಖಾಲಿಗೆ ಬಿದ್ದು “ವಿಜಯಣ್ಣ ನನ್ನ ಮಂತ್ರಿ ಮಾಡಿ” ಎಂದಿದ್ದು ನಾನು ನೋಡಿದ್ದೇನೆ, ಅದೇ ರೀತಿ ಕಾವೇರಿ ಭವನದಲ್ಲಿ ಯಡಿಯೂರಪ್ಪ ಕಾಲು ಹಿಡಿದಿದ್ದನ್ನು ನಾನೇ ನೋಡಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next