ಬೆಂಗಳೂರು: ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹಾಗೂ ಅನ್ಯ ಧರ್ಮೀಯರಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ಅವರು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಹಾಗೂ ಧರ್ಮವನ್ನು ಗೌರವಿಸಬೇಕು. ನಾವು ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಯಾರೋ ಕೆಲವರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಗಲಾಟೆ ಅಶಾಂತಿ ಪರ ನಮ್ಮ ಸರಕಾರ ಇಲ್ಲ. ಸಮಾಜ ವಿರೋಧಿ ಕೆಲಸ ಮಾಡುವಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್ ಯಾವಾಗಲೂ ಸಮಾಜದಲ್ಲಿ ಗೊಂದಲ ಉಂಟು ಮಾಡಿದೆ ಎಂದರು.
ಹಲಾಲ್ ಮಾಡುವುದನ್ನು ಯಾರು ಪಾಲಿಸುತ್ತಾರೊ ಅದನ್ನು ಪಾಲಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟ ಇಲ್ಲದವರು ಅವರ ಸಂಸ್ಕೃತಿ ಪಾಲಿಸಲು ಅವಕಾಶ ಇದೆ. ಕಾಂಗ್ರೆಸ್‌ನವರು ರಾಜಕೀಯವನ್ನು ಕ್ರಿಮಿನಲೈಸೇಷನ್ ಮಾಡುತ್ತಾ ಬಂದಿದ್ದಾರೆ . ನಾವು ಸಂಸ್ಕೃತಿ ರಕ್ಷಣೆ ಮಾಡುವವರು ಕಾಂಗ್ರೆಸ್ ನಲ್ಲಿಯೇ ಪ್ರಜಾಪ್ರಭುತ್ವ ಇಲ್ಲ. ಕುಟುಂಬದ ಆಧಾರದಲ್ಲಿ ರಾಜಕೀಯ ಮಾಡುವವರು ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿರುವ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ನಾವು ಯಾವ ಕಾರಣಕ್ಕೆ ಕನ್ನಡ ಕಡ್ಡಾಯ ಮಾಡಿದ್ದೇವೆ ಅನ್ನುವುದನ್ನು ಕೋರ್ಟ್‌ಗೆ ತಿಳಿಸಿದ್ದೇವೆ.
-ಡಾ| ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ