ಬೆಂಗಳೂರು: ನಗರದ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇಗೆಲ್ಲುತ್ತದೆ ಎಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ. ಇಲ್ಲಿ ಅವರ ಆಟ ನಡೆಯಲ್ಲ ಎಂದು ಹೇಳಿದರು.
ಕ್ಷೇತ್ರದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಸಮರ್ಥರಿದ್ದಾರೆ. ಆಡಳಿತ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರಿಂದ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ. ಈ ವಿಚಾರ ಕ್ಷೇತ್ರದ ಜನರಿಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದರು.
ಬೆಂಗಳೂರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಮಹಾನಗರ. ಮುನಿರತ್ನ ಮುಂದಿನ ದಿನಗಳಲ್ಲಿ ನಾಡಪ್ರಭುಗಳ ಪ್ರೇರಣೆಯೊಂದಿಗೆ, ಅವರ ಕನಸು-ದೂರದೃಷ್ಟಿಗೆ ಯಾವುದೇ ಮುಕ್ಕಾಗದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ. ಅವರಿಗೆ ಬೇಕಾದ ಎಲ್ಲ ಸಹಕಾರ ಸರಕಾರದಿಂದ ಸಿಗಲಿದೆ. ಕೇವಲ ಒಣ ರಾಜಕೀಯ ಮಾಡುವುದರಿಂದ, ಟೀಕೆಗಳನ್ನು ಮಾಡುತ್ತ ಕೂರುವುದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಯಷ್ಟೇ ಚರ್ಚೆಯ ವಿಷಯ ಎಂದು ಡಿಸಿಎಂ ಹೇಳಿದರು.
ಇದನ್ನೂ ಓದಿ:ಉಪ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ರ ಅನುಕಂಪದ ಗಿಮಿಕ್ ನಡೆಯಲ್ಲ: ಶ್ರೀರಾಮುಲು
ಈಗಾಗಲೇ ಕ್ಷೇತ್ರದಲ್ಲಿ ಮುನಿರತ್ನ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸಾರಿಗೆ, ರಸ್ತೆ, ಕುಡಿಯುವ ನೀರು, ಉದ್ಯಾನವನಗಳ ನಿರ್ವಹಣೆ ಸೇರಿ ಎಲ್ಲ ರಂಗಗಳಲ್ಲಿಯೂ ಅವರ ನೇತೃತ್ವದಲ್ಲಿ ಕ್ಷೇತ್ರವೂ ಉತ್ತಮ ಪ್ರಗತಿ ಕಾಣುತ್ತಿದೆ. ಇವರು ಕ್ಷೇತ್ರದಲ್ಲಿ ಸದಾ ಇರುತ್ತಾರೆ. ಹಾಗೆ ಬಂದು, ಹೀಗೆ ಹೋಗುವವರಿಗೆ ಮತ ಹಾಕಿ ಪ್ರಯೋಜನವಿಲ್ಲ. ಅಂಥವರು ಯಾರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಡಿಸಿಎಂ ಪ್ರತಿಪಕ್ಷ ನಾಯಕರನ್ನು ಕುಟುಕಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಮುನಿರತ್ನ, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.