ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ. ಚೆನ್ನಿಗಪ್ಪ ಇಂದು ನಿಧನರಾಗಿದ್ದಾರೆ.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪ ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವರು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ .
ನೆಲಮಂಗಲ ತಾಲೂಕಿನ ಬೈರನಾಯಕನಹಳ್ಲಿಯವರಾದ ಚೆನ್ನಿಗಪ್ಪನವರು, ಕೊರಟಗೆರೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಚೆನ್ನಿಗಪ್ಪನವರು ಅರಣ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
2019ರಲ್ಲಿ ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ನಂತರ ಹುದ್ದೆಯನ್ನು ತೊರೆದಿದ್ದರು.
ಸಿ. ಚೆನ್ನಿಗಪ್ಪನವರ ನಿಧನಕ್ಕೆ ಮಾಜಿ ಮುಖ್ಯಂಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಸಂತಾಪ ಸೂಚಿಸಿದ್ದಾರೆ. ತುಮಕೂರು ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದ ಚೆನ್ನಿಗಪ್ಪ ಅವರು ಪಕ್ಷದ ಬೆಳವಣಿಗೆಯಲ್ಲಿ ಬಹುವಾಗಿ ಶ್ರಮಿಸಿದ್ದರು. ಅವರ ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಕೋರುತ್ತೇನೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.