ಬೆಂಗಳೂರು: ಒಂದೆಡೆ ಬಿಜೆಪಿಯ ಬಣ ರಾಜಕಾರಣ ಪಕ್ಷದ ವರಿಷ್ಠರ ಅಂಗಳ ತಲುಪಿದ್ದು, ವಿಜಯೇಂದ್ರ ಗುಂಪಿನ ನಾಯಕರು ಯಡಿಯೂರಪ್ಪ ನಿವಾಸದಲ್ಲಿ ರವಿವಾರ ಸಭೆ ನಡೆಸಿ ಡಿ. 9ರ ವರೆಗೆ ವರಿಷ್ಠರು ಯಾವ ನಿರ್ಣಯ ಕೈಗೊಳ್ಳುತ್ತಾರೆ ಎಂದು ಕಾದು ನೋಡಿ ಡಿ. 10ರಂದು ದಾವಣಗೆರೆಯಲ್ಲಿ ಮತ್ತೊಂದು ಸಭೆಗೆ ಸಜ್ಜಾಗಿದ್ದಾರೆ.
ಮತ್ತೊಂದೆಡೆ ಶಾಸಕ ಯತ್ನಾಳ್ ಅವರು ದಿಲ್ಲಿಯಿಂದ ಯಾವ ಸಂದೇಶ ಹೊತ್ತು ತರುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಇದೇ ವಿಚಾರವಾಗಿ ಇತ್ತೀಚೆಗಷ್ಟೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ಈಗ ಯತ್ನಾಳ್ ದಿಲ್ಲಿಗೆ ತೆರಳಿದ್ದು, ವರಿಷ್ಠರ ಭೇಟಿ ಮಾಡಿ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ. ಅತ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಯತ್ನಾಳ್ರನ್ನು ಉಚ್ಚಾಟಿಸುವ ಬದಲು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸುವುದು ಸೂಕ್ತ ಎಂಬ ಚರ್ಚೆ ನಡೆಸಿದ್ದಾರೆ. ಒಟ್ಟಾರೆ ಬಿಜೆಪಿಯಲ್ಲಿನ ವಿಜಯೇಂದ್ರ-ಯತ್ನಾಳ್ ಬಣ ಬಡಿದಾಟಕ್ಕೆ ವರಿಷ್ಠರು ಮದ್ದರೆಯಲಿದ್ದಾರೆಯೇ ಎಂಬು ದನ್ನು ಕಾದು ನೋಡಬೇಕಿದೆ.
ಬಿಎಸ್ವೈ ನಿವಾಸದಲ್ಲಿ ಮುಖಂಡರ ಸಭೆ
ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಹರತಾಳು ಹಾಲಪ್ಪ ಸೇರಿ ಪಕ್ಷದ ಮುಖಂಡರು ರವಿವಾರ ಬೆಂಗಳೂರಿನಲ್ಲಿರುವ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನೇ ಮುಂದುವರಿಸುವಂತೆ ಸಭೆ ಯಲ್ಲಿ ಒತ್ತಡ ಹಾಕಿದ್ದು, ಮುಂದಿನ ವಿಧಾನಸಭಾ ಚುನಾವಣೆ ಯನ್ನೂ ವಿಜಯೇಂದ್ರರ ನೇತೃತ್ವದಲ್ಲೇ ನಡೆಸಬೇಕು. ಖಂಡಿತವಾಗಿಯೂ 135 ಸ್ಥಾನಗಳನ್ನು ಗೆಲ್ಲುತ್ತೇವೆಂಬ ಭರವಸೆಯನ್ನೂ ನೀಡಿದ್ದಾರೆ.
ಪಕ್ಷದ ಅಧ್ಯಕ್ಷರನ್ನು ಬಯ್ಯುವುದೆಂದರೆ ಪಕ್ಷವನ್ನೇ ನಿಂದಿಸಿದಂತೆ. ಇದು ಸರಿಯಲ್ಲ. ಮುಂದೆ ಏನಾಗಬೇಕೆಂದು ಪಕ್ಷಕ್ಕೆ ಆಗ್ರಹಿಸಿದ್ದೇವೆ. 10 ದಿನ ಸಮಯ ಕೊಡಿ ಎಲ್ಲ ಒಳ್ಳೆಯದಾಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಡಿ.9ರ ವರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. 10ರಂದು ದಾವಣಗೆರೆಯಲ್ಲಿ ಸಭೆ ಮಾಡುತ್ತೇವೆ. ಅಲ್ಲಿ ಕೆಲವು ನಿರ್ಣಯ ಆಗುವುದಿದೆ.
– ಹರತಾಳು ಹಾಲಪ್ಪ, ಮಾಜಿ ಸಚಿವ
ಪ್ರಮುಖರೆಲ್ಲ ಸೇರಿ ಸಭೆ ಮಾಡಿ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇವೆ. ಇದುವರೆಗೆ ಪ್ರವಾಸ ಮಾಡಿ ಕಾರ್ಯಕರ್ತರಿಂದ ಬಂದ ಅಭಿಪ್ರಾಯ ತಿಳಿಸಿದ್ದೇವೆ. ಸಂಘಟನೆಗೆ ಕೈ ಜೋಡಿಸಿ ಎಂದಿದ್ದಾರೆ. ಇಡೀ ಸಂಘಟನೆ ವಿಜಯೇಂದ್ರ ಪರ ಇದೆ.
– ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಚಿವ