ಕೊರೊನಾ ಕಾರಣದಿಂದ ತಮ್ಮ ಬಿಡುಗಡೆಯನ್ನು ಮುಂದೂಡುತ್ತ ಬಂದಿದ್ದ, ಅನೇಕ ಚಿತ್ರಗಳು ಈ ವರ್ಷ ಒಂದೊಂದಾಗಿ ತೆರೆಗೆ ಬರುತ್ತಿವೆ. ಅಂಥದ್ದೇ ಒಂದು ಚಿತ್ರ “ಬೈಪಾಸ್ ರೋಡ್’, ಇದೇ ಜು. 29ಕ್ಕೆ ಬಿಡುಗಡೆಯಾಗುತ್ತಿದೆ.
“ಎಂ. ಬಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಭರತ್ ರಾಜ್ ಎಂ, ಮಹೇಶ್ ಬಿ.ಎನ್ ನಿರ್ಮಿಸಿರುವ “ಬೈಪಾಸ್ ರೋಡ್’ ಸಿನಿಮಾದಲ್ಲಿ ಭರತ್ ಕುಮಾರ್, ತಿಲಕ್, ನೀತೂ ಗೌಡ, ನೇಹಾ ಸಕ್ಸೇನಾ, ಉದಯ್, ಮಾಸ್ಟರ್ ಆನಂದ್, ತಬಲನಾಣಿ, ಉಗ್ರಂ ಮಂಜು “ಬೈಪಾಸ್ ರೋಡ್’ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀನಿವಾಸ್ ಎಸ್. ಬಿ ನಿರ್ದೇಶನವಿದೆ. ಸದ್ಯ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ “ಬೈಪಾಸ್ ರೋಡ್’ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ಎಸ್. ಬಿ, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಹನಿಮೂನ್‌ಗಾಗಿ ಹೊರಟ ನವ ಜೋಡಿಗೆ “ಬೈಪಾಸ್ ರೋಡ್’ ಒಂದರಲ್ಲಿ ಅನಿರೀಕ್ಷಿತ ಘಟನೆಗಳು ಎದುರಾಗುತ್ತದೆ. ಅದು ಏನು? ಅದರಿಂದ ಮುಂದೇನಾಗುತ್ತದೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ’ ಎಂದು ಕಥಾಹಂದರ ಬಿಚ್ಚಿಟ್ಟರು.
“2017ರಲ್ಲಿ “ಬೈಪಾಸ್ ರೋಡ್’ ಸಿನಿಮಾ ಶುರುವಾಗಿ 2019ರಲ್ಲಿ ಶೂಟಿಂಗ್ ಕೂಡ ಮುಗಿಯಿತು. ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗುವ ಹೊತ್ತಿಗೆ ಕೊರೊನಾ, ಲಾಕ್ ಡೌನ್ ಎದುರಾಯ್ತು. ಹೀಗಾಗಿ ಸಿನಿಮಾದ ಕೆಲಸಗಳು ತಡವಾಯ್ತು. ಆನಂತರ ಸಿನಿಮಾದ ಕೆಲಸಗಳು ಪೂರ್ಣಗೊಂಡು, ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಮತ್ತೆ ಕೊರೊನಾ ಎರಡು-ಮೂರನೇ ಅಲೆಯ ಆತಂಕದಿಂದ ಥಿಯೇಟರ್‌ಗಳು ಬಂದ್ ಆಯ್ತು. ಹೀಗಾಗಿ ಅಂದುಕೊಂಡ ಸಮಯಕ್ಕೆ ಸಿನಿಮಾ ರಿಲೀಸ್ ಆಗಲಿಲ್ಲ. ಈಗ ಅಂತಿಮವಾಗಿ ಇದೇ ಜು. 29ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ’ ಎಂದು ಸಿನಿಮಾ ಬಿಡುಗಡೆ ತಡವಾಗಿರುವುದಕ್ಕೆ ಕಾರಣ ವಿವರಿಸಿದರು ನಿರ್ಮಾಪಕ ಭರತ್ ರಾಜ್ ಎಂ.
“ಇಡೀ ಸಿನಿಮಾದಲ್ಲಿ ತಿರುವು ಕೊಡುವಂಥ, ಸಾಕಷ್ಟು ಸಸ್ಪೆನ್ಸ್ ಇರುವಂಥ ಪಾತ್ರ ನನ್ನದು. ಇಂದಿನ ಜನರೇಶನ್ ಇಷ್ಟವಾಗುವಂಥ ಸಬ್ಜೆಕ್ಟ್ ಸಿನಿಮಾದ ಲ್ಲಿರುವುದರಿಂದ, ಥಿಯೇಟರ್‌ನಲ್ಲೂ “ಬೈಪಾಸ್ ರೋಡ್’ ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತು ನಟ ಭರತ್ ಕುಮಾರ್ ಅವರದ್ದು.
ನಿರ್ಮಾಪಕ ಮಹೇಶ್ ಬಿ. ಎನ್, ವಿತರಕ “ಸತ್ಯ ಮಯೂರ ಪಿಕ್ಚರ್’ನ ಮಂಜುನಾಥ್ ಸಿನಿಮಾ ಬಿಡುಗಡೆಯ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.