Advertisement

ಸ್ವಾವಲಂಬನೆಯ ಬದುಕಿಗೆ ದಾರಿ ತೋರಿದ ಹೆಗ್ಗಳಿಕೆ

10:59 PM Feb 17, 2020 | Sriram |

ಗ್ರಾಮೀಣ ಭಾಗದ ಹೈನುಗಾರರ ಕನಸುಗಳನ್ನು ನನಸು ಮಾಡುವತ್ತ ಬೈಂದೂರು ಹಾಲು ಉತ್ಪಾದಕರ ಸಂಘ ಗಮನಾರ್ಹ ಸಾಧನೆ ಮಾಡಿದೆ. ಸಹಕಾರಿ ಕ್ಷೇತ್ರದ ಹಿರಿಯ ಸಂಘಗಳಲ್ಲೊಂದಾದ ಇದರ ಯಶಸ್ಸಿನ ಕಥೆಯೂ ವಿಶಿಷ್ಟವಾದದ್ದು.

Advertisement

ಬೈಂದೂರು: ಗ್ರಾಮೀಣ ಭಾಗವಾದ ಬೈಂದೂರಿನಲ್ಲಿ ನಾಲ್ಕು ದಶಕಗಳ ಹಿಂದೆ ಹೈನುಗಾರಿಕೆಗೆ ಉತ್ತೇಜನ ನೀಡುವ ಕನಸಿನೊಂದಿಗೆ ಆರಂಭಗೊಂಡಿರುವ ಬೈಂದೂರು ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಸ್ತುತ ಕ್ಷೇತ್ರದ ಹಿರಿಯ ಸಹಕಾರಿ ಸಂಘವಾಗಿ ಬೆಳೆದು ನಿಂತಿದೆ.

ಇಲ್ಲಿನವರಿಗೆ ಕೃಷಿಯೊಂದಿಗೆ ಉಪಕಸು ಬಾಗಿ ಹೈನುಗಾರಿಕೆ ಪ್ರಮುಖ ಆದ್ಯತೆ. ಆದರೆ ಅಂದು ಸಮರ್ಪಕ ಮಾರ್ಗದರ್ಶನವಿಲ್ಲದೆ ಇದ್ದ ಕಾಲದಲ್ಲಿ ಹೈನುಗಾರರ ಬದುಕಿಗೆ ಹೊಸ ಪ್ರೇರಣೆಯಾಗಿ ರೂಪು ತಾಳಿರುವುದು ಬೈಂದೂರು ಹಾಲು ಉತ್ಪಾದಕರ ಸಹಕಾರಿ ಸಂಘವಾಗಿದೆ.

1976ರಲ್ಲಿ ಪ್ರಾರಂಭ
ಮೂಲತಃ ಬೈಂದೂರಿನ ಹೊಳ್ಳರ ಮನೆಯವರ ಹಿರಿಯರಾದ ಶ್ರೀನಿವಾಸ ಹೊಳ್ಳರು ಇದರ ಸ್ಥಾಪಕರು. ಮಹಾಬಲೇಶ್ವರ ಹೊಳ್ಳರ ಕಟ್ಟಡದಲ್ಲಿ ಬಾಡಿಗೆಗೆ ಕಚೇರಿ ಆರಂಭಿಸಿ ಹಾಲು ಸಂಗ್ರಹ ಮತ್ತು ಪಡಿತರ ವಿತರಣೆಗಷ್ಟೇ ಸೀಮಿತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಹಿಂದೆಲ್ಲಾ ಹಾಲು ಮಾರಾಟ ವ್ಯಾವಹಾರಿಕವಾಗಿ ಅಷ್ಟೇನು ಲಾಭದಾಯಕವಾಗಿರಲಿಲ್ಲ. ಅಕ್ಕ ಪಕ್ಕದ ಮನೆಯವರಿಗೆ ಬಿಡಿ ವ್ಯಾಪಾರಕಷ್ಟೆ ಸೀಮಿತವಾಗಿತ್ತು.

ಹೈನುಗಾರರಿಗೆ ವೇದಿಕೆ
ಈ ಹಂತದಲ್ಲಿ ಹಾಲು ಉತ್ಪಾದಕರಿಗೊಂದು ವೇದಿಕೆ ಕಲ್ಪಿಸಿ ತನ್ಮೂಲಕ ಸರಕಾರ ಹಾಗೂ ಇಲಾಖೆಯ ನೆರವಿನಿಂದ ಸ್ವಾವಲಂಬನೆಯ ಬದುಕು ನೀಡುವ ಧ್ಯೇಯೊದ್ದೇಶದಿಂದ ಆರಂಭ ಗೊಂಡಿರುವ ಸಂಸ್ಥೆ ಇದಾಗಿದೆ.

Advertisement

1983-84ರಲ್ಲಿ ದ.ಕ ಜಿಲ್ಲಾ ಹಾಲು ಒಕ್ಕೂಟದೊಡನೆ ಸಂಯೋಜನೆಗೊಂಡು ಪ್ರಸ್ತುತ ಹಾಲು ಖರೀದಿ, ಪಶು ಆಹಾರ, ಲವಣ ಮಿಶ್ರಣ ಆಹಾರ ಸೇರಿದಂತೆ ಪಶುಗಳಿಗೆ ಅವಶ್ಯವಿರುವ ಎಲ್ಲಾ ಸವಲತ್ತುಗಳನ್ನು ನೀಡುತ್ತಿದೆ.

ಆರಂಭದಲ್ಲಿ ಕೇವಲ 100 ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು ಈ ಸಂಸ್ಥೆಯಲ್ಲಿ ಪ್ರತಿದಿನ 1400 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಪ್ರತಿದಿನ 120 ಲೀಟರ್‌ ಹಾಲು ಪೂರೈಸುವ ನಾಲ್ಕೈದು ಸದಸ್ಯರು ಈ ಸಂಘದಲ್ಲಿದ್ದಾರೆ. ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗುಜರಾತ್‌ ಹೈನುಗಾರಿಕೆ ಬಗ್ಗೆ ಅಲ್ಲಿಗೆ ತೆರಳಿ ಮಾಹಿತಿಗಳನ್ನು ಪಡೆದುಕೊಂಡಿದ್ದು ಜತೆಗೆ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸದಸ್ಯರಿಗೆ ಕಾರ್ಕಳ, ಮಂಗಳೂರು ಮುಂತಾದ ಕಡೆ ಅಧ್ಯಯನ ಪ್ರವಾಸ ಏರ್ಪಡಿಸಿ ಹೈನುಗಾರಿಕೆ ಕುರಿತ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ.

2009ರಲ್ಲಿ ಸ್ವಂತ ಕಟ್ಟಡ
ಈ ಸಂಸ್ಥೆ 2009ರಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಂಡಿದೆ. ಒಟ್ಟು 520 ಸದಸ್ಯರಿದ್ದು 33210 ಷೇರು ಬಂಡವಾಳವಿದೆ. ಸದಸ್ಯರಿಗೆ ಇಲಾಖೆಯಿಂದ ಸಿಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಸುಸಜ್ಜಿತ ಕಟ್ಟಡದಲ್ಲಿ ಪಶು ಆಹಾರ ಸಂಗ್ರಹ, ಮಾರಾಟ ಮಳಿಗೆ, ಶುಚಿತ್ವ, ಹಾಲಿನ ಪಾತ್ರೆ, ಮಾರಾಟ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲಾಗಿದೆ.

ಸದಸ್ಯರಿಗೆ ಹೈನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರದಿಂದ ಮತ್ತು ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ನೀಡುತ್ತ ಉತ್ತಮ ಸೇವೆ ನೀಡಲಾಗುತ್ತದೆ. ಅತ್ಯಂತ ಹಿರಿಯ ಸಂಘವಾಗಿರುವ ಹೆಮ್ಮೆಯೊಂದಿಗೆ ಮಾದರಿ ಹಾಲು ಉತ್ಪಾದಕ ಸಂಘವಾಗಿರುವುದು ಸಂತೃಪ್ತಿ ನೀಡಿದೆ.
ನಾರಾಯಣ ರಾವ್‌,ಅಧ್ಯಕ್ಷರು

ಅಧ್ಯಕ್ಷರು:
ಭವಾನಿ ಶಂಕರ್‌ ನಾಯಕ್‌, ಎಚ್‌. ಸುಬ್ರಾಯ ಶೇರುಗಾರ್‌, ನಾರಾಯಣ ರಾವ್‌ (ಹಾಲಿ)
ಕಾರ್ಯದರ್ಶಿಗಳು:
ರಾಮಚಂದ್ರ ಬಿ. (ಹಾಲಿ)

-ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next